Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಕಪಾಲಿಯಲ್ಲಿ ಭಕ್ತ ಪ್ರಹ್ಲಾದನ ನೋವು-ನಲಿವುಗಳು

Friday, 15.06.2018, 3:05 AM       No Comments

ಡಾ. ರಾಜ್​ಕುಮಾರ್ ಅವರ ಆವರೆಗಿನ ವೃತ್ತಿಬದುಕಿನ ದೊಡ್ಡದೊಂದು ಆಸೆಯಾಗಿ, ಕನಸಾಗಿ ಉಳಿದಿತ್ತು ಹಿರಣ್ಯ ಕಶಿಪುವಿನ ಖಳಪಾತ್ರ! ಹೌದು, ಅದೊಂದು ರುದ್ರ, ಭೀಕರವಾದ ಪಾತ್ರ. ಎಂಥ ನುರಿತ ಕಲಾವಿದರಿಗೂ ಈ ಪಾತ್ರದಲ್ಲಿ ನಟಿಸಲು ಎಂಟೆದೆ ಬೇಕು. ಅದರಲ್ಲೂ ಸಾಮಾನ್ಯನಾದ ನಟನೊಬ್ಬ ಕನಸು ಕಾಣುವುದೂ ಸಾಧ್ಯವಿಲ್ಲದಂಥ ಅಮೋಘ ಪಾತ್ರವದು. ಈ ಕಾರಣಕ್ಕಾಗಿಯೇ ಡಾ. ರಾಜ್​ಕುಮಾರ್ ಅವರು ಗರ್ವ, ದರ್ಪ, ಅಟ್ಟಹಾಸ, ದಾಷ್ಟ್ಯ ಮತ್ತು ದುಷ್ಟ ಗುಣಗಳ ಹಿರಣ್ಯನ ಸಂಕೀರ್ಣ ಪಾತ್ರದ ಕನಸು ಕಂಡದ್ದು! ಇದಕ್ಕಿಂತಲೂ ಹೆಚ್ಚಾಗಿ ಈ ಪಾತ್ರವನ್ನು ರಂಗಭೂಮಿಯ ಮೇಲೆ ಪಿತಾಶ್ರೀ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರು ಜೀವಂತವಾಗಿ ಹಿಡಿದಿಟ್ಟಿದ್ದನ್ನು ಕಣ್ಣಾರೆ ಕಂಡಿದ್ದರು ರಾಜ್​ಕುಮಾರ್. ಹೀಗಾಗಿ ಆ ಪಾತ್ರದಲ್ಲಿ ತಾವು ಬೆಳ್ಳಿತೆರೆಯ ಮೇಲೆ ನಟಿಸಿ ತಮ್ಮೊಳಗಿನ ಕಲಾವಿದನ ಪರೀಕ್ಷೆ ಮಾಡಿಕೊಳ್ಳಬೇಕೆಂಬ ತುಡಿತ ಬಹುಕಾಲದಿಂದಲೂ ಇತ್ತು ರಾಜ್ ಅವರಿಗೆ.

ಕಾಲ ಕೂಡಿ ಬಂದದ್ದು 1983ರಲ್ಲಿ. ಇಂದಿಗೆ ಸರಿಯಾಗಿ 35 ವರ್ಷಗಳ ಹಿಂದೆ ರಾಜ್ ಅವರ ಆ ಕನಸು ನನಸಾಯಿತು. ಹೌದು, ‘ಭಕ್ತ ಪ್ರಹ್ಲಾದ’ ಚಿತ್ರ ತೆರೆಕಂಡು ಆಗಲೇ 35 ವರ್ಷಗಳಾದವು. ಆಗ ತಮ್ಮ ಕಿರಿಯ ಪುತ್ರ ಮಾ. ಲೋಹಿತ್ (ಪುನೀತ್ ರಾಜ್​ಕುಮಾರ್) ಪುಟ್ಟ ಬಾಲಕನಾಗಿದ್ದ. ಪ್ರಹ್ಲಾದ ಪಾತ್ರಕ್ಕೆ ಹೇಳಿ ಮಾಡಿಸಿದ ವಯಸ್ಸು. ಹಿರಣ್ಯ ಕಶಿಪು ತಮ್ಮ ಕನಸಿನ ಪಾತ್ರವಾದರೆ, ಪ್ರಹ್ಲಾದ ಪಾತ್ರ ತಮ್ಮ ಪುತ್ರನ ಅಭಿನಯ ಪ್ರತಿಭೆಯನ್ನು ಒರೆಗೆ ಹಚ್ಚುವ ಕನಸಿನ ಪಾತ್ರ. ಹೀಗೆ ತಂದೆ ಮತ್ತು ಮಗ ಒಂದೇ ಚಿತ್ರದ ವಿಭಿನ್ನ ಪಾತ್ರಗಳಲ್ಲಿ ನಟಿಸುವುದು ಅವರ ಅಭಿಮಾನಿಗಳಿಗೆ ಹಬ್ಬ! ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕಂಡ ಕನಸುಗಳೆಲ್ಲವೂ ನನಸಾಗುವುದು ಕಷ್ಟವೇ. ಅದಕ್ಕೇ ಹೇಳುವುದು, ಯೋಗ ಮತ್ತು ಯೋಗ್ಯತೆ ಕೂಡಿ ಬರಬೇಕು ಅಂತ! ಇಂಥದ್ದೊಂದು ಸುವರ್ಣಾವಕಾಶ ರಾಜ್​ಕುಮಾರ್ ಅವರನ್ನು ಹುಡುಕಿಕೊಂಡು ಬಂತು. ‘ಭಕ್ತ ಪ್ರಹ್ಲಾದ’ ಚಿತ್ರವನ್ನು ನಿರ್ವಿುಸಲು ಎಸ್.ಎ. ಗೋವಿಂದರಾಜ್ ಸಿದ್ಧರಾದರು. ವಿಜಯ್ ನಿರ್ದೇಶಕರಾಗಿ ಆಯ್ಕೆಯಾದರು. ಅತ್ಯದ್ಭುತ ಎನ್ನುವಂಥ ಚಿತ್ರಕಥೆಯನ್ನು ರಾಜ್ ಅವರ ’ಆಸ್ಥಾನ ಪಂಡಿತ’ರಂತಿದ್ದ ಚಿ. ಉದಯಶಂಕರ್ ಬರೆದರು. ಜತೆಗೆ ಹೃದಯಕ್ಕೆ ತಟ್ಟುವಂಥ ಗಂಭೀರ ಸಂಭಾಷಣೆ ಹಾಗೂ ಅರ್ಥಗರ್ಭಿತ ಹಾಡುಗಳನ್ನು ಬರೆದರು. ಹಿರಣ್ಯ ಕಶಿಪುವಾಗಿ ರಾಜ್​ಕುಮಾರ್ ಮತ್ತು ಪ್ರಹ್ಲಾದ ಪಾತ್ರದಲ್ಲಿ ಮಾ. ಲೋಹಿತ್ (ಪುನೀತ್) ಅಭಿನಯಿಸುವುದೆಂದು ನಿರ್ಧಾರವಾಯಿತು. ಉಳಿದ ಪಾತ್ರಗಳಿಗೆ ಸರಿತಾ, ಅಂಬಿಕಾ, ಅನಂತನಾಗ್, ಶಿವರಾಮ್ ತೂಗುದೀಪ ಶ್ರೀನಿವಾಸ್ ಮೊದಲಾದವರು ಆಯ್ಕೆಯಾದರು. ಸಂಗೀತ ನಿರ್ದೇಶನಕ್ಕೆ ಟಿ.ಜಿ. ಲಿಂಗಪ್ಪ ಮತ್ತು ಛಾಯಾಗ್ರಹಣಕ್ಕೆ ಎಸ್.ಎಸ್.ಲಾಲ್ ಆಯ್ಕೆಯಾದರು. ಚಿ. ಉದಯಶಂಕರ್ ಅವರ ಅಚ್ಚುಕಟ್ಟಾದ ಸ್ಕ್ರಿಪ್ಟ್​ನಿಂದಾಗಿ ಚಿತ್ರೀಕರಣ ಸರಾಗವಾಗಿ ಸಾಗಿತು. ಆದರೆ, ಕ್ಲೈಮಾಕ್ಸ್ ಸನ್ನಿವೇಶದ ಚಿತ್ರೀಕರಣ ನಡೆದಾಗ ಮಾತ್ರ ಪುಟ್ಟ ಬಾಲಕ ಲೋಹಿತ್ ತನ್ನ ತಂದೆಯ ರೌದ್ರಾವತಾರ ಕಂಡು ಹೆದರಿ ಕಂಗಾಲಾಗಿ ಬಿಟ್ಟರು! ಸಾಕ್ಷಾತ್ ಹಿರಣ್ಯಕಶಿಪುವೇ ಮೈಮೇಲೆ ಹೊಕ್ಕಂತೆ ಭಾಸವಾದ ರಾಜಕುಮಾರ್ ಅವರ ಪಾತ್ರದ ಗತ್ತು, ಗೈರತ್ತು ಕಂಡು ಲೋಹಿತ್ ಬೆಚ್ಚಿ ಬಿದ್ದು ಕ್ಯಾಮರಾ ಮುಂದೆ ನಿಂತು ಅಭಿನಯಿಸಲು ನಿರಾಕರಿಸಿದರು! ಕೊನೆಗೆ ಸೆಟ್​ನ ಯಾವುದೋ ಮೂಲೆಯಲ್ಲಿ ಅಡಗಿ ಕುಳಿತಿದ್ದ ಲೋಹಿತ್​ರನ್ನು ಕರೆದುಕೊಂಡು ಬಂದು ಕ್ಯಾಮರಾ ಮುಂದೆ ಅಭಿನಯಿಸುವಂತೆ ಮಾಡಲು ರಾಜ್ ಕುಟುಂಬದ ಪರಮಾಪ್ತ ಹೊನ್ನವಳ್ಳಿ ಕೃಷ್ಣ ಪಟ್ಟಪಾಡನ್ನು ಅವರ ಮಾತಿನಲ್ಲೇ ಕೇಳಬೇಕು! ಕೊನೆಗೂ ಚಿತ್ರೀಕರಣ ಮುಗಿಸಿದ ‘ಭಕ್ತ ಪ್ರಹ್ಲಾದ’ ಚಿತ್ರ ಬೆಂಗಳೂರಿನ ಹೃದಯ ಭಾಗದ ‘ಕಪಾಲಿ’ ಚಿತ್ರಮಂದಿರದಲ್ಲಿ ತೆರೆಕಂಡಿತು. 80 ಅಡಿ ಎತ್ತರದ ಹಿರಣ್ಯಕಶಿಪುವಿನ ಬೃಹತ್ ಕಟೌಟ್ ಆ ಕಾಲದ ದೊಡ್ಡ ಆಕರ್ಷಣೆಯಾಗಿತ್ತು. ಕನಸು ನನಸಾದ ಖುಷಿಯಲ್ಲಿ ಡಾ.ರಾಜ್ ಅವರು ಸದಾಶಿವನಗರದ ತಮ್ಮ ಮನೆಯಲ್ಲಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು! ತೆರೆಕಂಡ ಎರಡು ವಾರಗಳ ಕಾಲ ಎಲ್ಲವೂ ಸುಸೂತ್ರವಾಗಿ ಸಾಗಿತ್ತು. ಹದಿನಾಲ್ಕು ದಿನಗಳ ಕಾಲವೂ ‘ಕಪಾಲಿ’ ಚಿತ್ರಮಂದಿರ ಹೌಸ್​ಫುಲ್. ಚಿತ್ರವನ್ನು ಪ್ರೇಕ್ಷಕ ಮಹಾಪ್ರಭು ಸ್ವೀಕರಿಸಿದ್ದಾಗಿತ್ತು. ರಾಜ್ ಅವರು ಹಿರಣ್ಯಕಶಿಪುವಾಗಿ ಅತ್ಯದ್ಭುತ ಅಭಿನಯ ನೀಡಿದ್ದನ್ನು ಕಂಡ ಜನ ಮತ್ತು ಪತ್ರಿಕೆಗಳು ಮುಕ್ತಕಂಠದಿಂದ ಪ್ರಶಂಸಿಸುತ್ತಿರುವಂತೆಯೇ ದೊಡ್ಡದೊಂದು ಆಘಾತ ಇಡೀ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿತ್ತು! ಅದೊಂದು ಭೀಕರ ದುರಂತ. ಈ ದುರಂತಕ್ಕೆ ಆಗಿನ ಮಾಧ್ಯಮಗಳು ಇಟ್ಟ ಹೆಸರು; ‘ಗಂಗಾರಾಂ ಕಟ್ಟಡ ದುರಂತ’! ಹೌದು, ‘ಕಪಾಲಿ’ ಚಿತ್ರಮಂದಿರಕ್ಕೆ ಅಂಟಿಕೊಂಡಂತಿದ್ದ ‘ಗಂಗಾರಾಂ’ ಹೆಸರಿನ ಬೃಹತ್ ಕಟ್ಟಡ ಕುಸಿದುಬಿತ್ತು. ನೆಲಕ್ಕಪ್ಪಳಿಸಿದ ರಭಸಕ್ಕೆ ‘ಕಪಾಲಿ’ ಟಾಕೀಸಿನ ಒಂದು ಭಾಗದ ಗೋಡೆಯೂ ಕುಸಿಯಿತು. ಜತೆಗೆ ಆ ಬಿಳಿಯ ಬೃಹತ್ ಪರದೆ ಕೂಡ ಹರಿಯಿತು! ಆಗ ‘ಭಕ್ತ ಪ್ರಹ್ಲಾದ’ ಚಿತ್ರದ ಮಧ್ಯಾಹ್ನದ ಪ್ರದರ್ಶನ ನಡೆಯುತ್ತಿತ್ತು. ಪ್ರೇಕ್ಷಕರು ಸಿನಿಮಾ ನೋಡುವುದರಲ್ಲಿ ತನ್ಮಯರಾಗಿರುವಂತೆಯೇ ಭಯಂಕರವಾದ ಶಬ್ಧದೊಂದಿಗೆ ‘ಕಪಾಲಿ’ಯ ಬಲ ಗೋಡೆ ಕುಸಿದು ಬಿತ್ತು. ಏನಾಗುತ್ತಿದೆ ಎನ್ನುವುದು ತಿಳಿಯದೇ ಪ್ರೇಕ್ಷಕರು ಕತ್ತಲಲ್ಲಿ ಪರದಾಡುತ್ತಿರುವಂತೆಯೇ ಕರೆಂಟು ಕೂಡ ಕೈಕೊಟ್ಟಿತು. ಓಡಾಟ, ನುಗ್ಗಾಟದಿಂದಾಗಿ ಇಬ್ಬರು ಪ್ರೇಕ್ಷಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಹೇಗೋ ತಪ್ಪಿಸಿಕೊಂಡು ಹೊರಬಂದವರಿಗೆ ಕಾಣಿಸಿದ್ದು ದಟ್ಟ ಹೊಗೆಯಂಥ ಧೂಳು ಮತ್ತು ಪಕ್ಕದಲ್ಲೇ ಕುಸಿದು ಬಿದ್ದ ‘ಗಂಗಾರಾಂ’ ಕಟ್ಟಡ. ಈ ಕಟ್ಟಡದಡಿ ಸಿಲುಕಿದ್ದ ನೂರಾರು ಮಂದಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡರು. ಇದು ನಡೆದದ್ದು 1983ರ ಸೆ.12ರಂದು. ಎರಡೇ ಎರಡು ವಾರಗಳ ಪ್ರದರ್ಶನ ಕಂಡಿದ್ದ ‘ಭಕ್ತ ಪ್ರಹ್ಲಾದ’ ಚಿತ್ರದ ಪ್ರದರ್ಶನ ಅಲ್ಲಿಗೇ ನಿಂತು ಹೋಯಿತು. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಿತು. ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಇತರ ಸಂಘ ಸಂಸ್ಥೆಗಳು ಮೃತರ ಕುಟುಂಬಕ್ಕೆ ಪರಿಹಾರ ನೀಡಿದವು. 1983ರ ಸೆ.16ರ ಒಂದು ಪ್ರದರ್ಶನದ ಗಳಿಕೆಯನ್ನು ರಾಜ್ಯದ ಪ್ರಮುಖ ಕೇಂದ್ರಗಳ ಎಲ್ಲ ಚಿತ್ರಮಂದಿರಗಳು ಮೃತರ ಕುಟುಂಬಕ್ಕೆ ಕೊಟ್ಟವು. ಈ ಟಿಕೆಟ್ ಅಮೌಂಟ್​ಗೆ

ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿತು. ಪರಿಹಾರದ ಕಾರ್ಯ ಒಂದು ಕಡೆ ನಡೆದಿರುವಂತೆಯೇ ‘ಕಪಾಲಿ’ ಕಟ್ಟಡದ ಸುರಕ್ಷತೆಯ ಪರೀಕ್ಷೆಯನ್ನು ಚೆನ್ನೈ ಮೂಲದ ಕಂಪನಿಯೊಂದು ನಡೆಸಿತು. ಕೆಲವರಂತೂ ಶಿಥಿಲಗೊಂಡ ಕಟ್ಟಡವನ್ನು ಕೆಡವುವಂತೆ ಸಲಹೆ ನೀಡಿದರು. ಆದರೆ ಮದರಾಸಿನಿಂದ ಬಂದಿದ್ದ ತಜ್ಞರ ತಂಡ ಕೂಲಂಕಷವಾಗಿ ಕಟ್ಟಡವನ್ನು ಪರಿಶೀಲಿಸಿ, ‘ಸೂಕ್ತ ರಿಪೇರಿಯೊಂದಿಗೆ ಕಟ್ಟಡವನ್ನು ಮರು ಬಳಕೆ ಮಾಡಬಹುದು’ ಎಂಬ ಸರ್ಟಿಫಿಕೇಟ್ ನೀಡಿತು. ಈ ವರದಿಯ ಆಧಾರದ ಮೇಲೆ ‘ಕಪಾಲಿ’ ಚಿತ್ರಮಂದಿರವನ್ನು ರಿಪೇರಿ ಮಾಡಿ ಮರುಬಳಕೆಗೆ ಸಿದ್ಧಗೊಳಿಸಿತು ಮ್ಯಾನೇಜ್ಮೆಂಟ್. ಆದರೆ, ಅಷ್ಟರಲ್ಲಾಗಲೇ ತಿಂಗಳುಗಟ್ಟಲೆ ಕಳೆದಿರುವುದರಿಂದ ‘ಭಕ್ತ ಪ್ರಹ್ಲಾದ’ ಚಿತ್ರದ ಬದಲು ರಾಜ್​ಕುಮಾರ್ ಅಭಿನಯದ ‘ಮಯೂರ’ ಚಿತ್ರವನ್ನು ಪ್ರದರ್ಶಿಸಲಾಯಿತು. ಇದು 35 ವರ್ಷಗಳ ಹಿಂದಿನ ಫ್ಲಾಶ್​ಬ್ಯಾಕ್. ಈಗ ನೋಡಿದರೆ ಕರ್ನಾಟಕದ ಹೆಮ್ಮೆಯಂತಿದ್ದ ‘ಕಪಾಲಿ’ ಚಿತ್ರಮಂದಿರ ನೆಲಸಮವಾಗಿದೆ. ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಕನ್ನಡದ ಹೆಮ್ಮೆಯ ರಾಜಕುಮಾರ್ ನೆನಪು ಮಾತ್ರವಾಗಿದ್ದಾರೆ. ಚಿತ್ರಕಥೆ ಬರೆದು, ಸೊಗಸಾದ ಗೀತೆ ರಚಿಸಿ, ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ಸಾಹಿತ್ಯ ಬ್ರಹ್ಮ ಚಿ.ಉದಯಶಂಕರ್ ಕಾಲವಾಗಿದ್ದಾರೆ. ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ, ಕ್ಯಾಮರಾ ಕೆಲಸಕ್ಕಾಗಿ ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದ ಎಸ್.ಎಸ್.ಲಾಲ್, ಅತ್ಯುತ್ತಮ ಧ್ವನಿಗ್ರಾಹಕ ಪ್ರಶಸ್ತಿ ಪಡೆದ ಪಾಂಡು, ಅದ್ಭುತವಾಗಿ ನಟಿಸಿದ ತೂಗುದೀಪ ಶ್ರೀನಿವಾಸ್… ಬರೀ ನೆನಪಾಗಿ ಹೋದವರು ಒಬ್ಬರಾ? ಇಬ್ಬರಾ? ಆದರೆ, ಅಂದು ಪ್ರೇಕ್ಷಕರ ಮನಸೂರೆಗೊಂಡ ‘ಭಕ್ತ ಪ್ರಹ್ಲಾದ’ ಚಿತ್ರ ಅಜರಾಮರವಾಗಿ ಉಳಿದಿದೆ…

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ:  [email protected], [email protected])

 

Leave a Reply

Your email address will not be published. Required fields are marked *

Back To Top