Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ರಾಜ್ ವೃತ್ತಿಬದುಕಿನ ಉತ್ತುಂಗ; ಜೀವನ ಚೈತ್ರ

Friday, 02.03.2018, 3:05 AM       No Comments

| ಗಣೇಶ್ ಕಾಸರಗೋಡು

ವರನಟ ಡಾ. ರಾಜ್​ಕುಮಾರ್ ಅಭಿನಯದ ‘ಜೀವನ ಚೈತ್ರ’ ಚಿತ್ರಕ್ಕೆ ಮೊದಲು ‘ಮನಸು ಮಲ್ಲಿಗೆ’ ಎಂಬ ಹೆಸರಿಡಲಾಗಿತ್ತಾ? ಹೌದೆನ್ನುತ್ತದೆ ರಾಜ್ ಕುಟುಂಬದ ಮೂಲ.

ಅದು ನಡೆದದ್ದು ಹೀಗೆ; 1989ರ ಸುಮಾರಿಗೆ ‘ಪರಶುರಾಮ’ ಚಿತ್ರದಲ್ಲಿ ನಟಿಸಿದ ನಂತರ ರಾಜ್​ಕುಮಾರ್ ಅಭಿನಯದಲ್ಲಿ ಆಸಕ್ತಿ ಕಳೆದುಕೊಂಡರು. ಇದಕ್ಕೆ ಕಾರಣವಾದ ಮತ್ತೊಂದು ದುರಂತ ಪ್ರಕರಣವೆಂದರೆ, ಅವರು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ ಹೆತ್ತಮ್ಮನ ಸಾವು.

ಲಕ್ಷ್ಮಮ್ಮ ಅವರು ಬದುಕಿರುವಷ್ಟೂ ಕಾಲ ಲವಲವಿಕೆಯಿಂದಿದ್ದ ರಾಜ್, ಅವರ ಸಾವಿನ ನಂತರ ಅಂತಮುಖಿಯಾಗಿಬಿಟ್ಟರು! ಒಂದು ಹಂತದವರೆಗೆ ಕುಟುಂಬದ ಯಾರೂ ಅವರನ್ನು ಡಿಸ್ಟರ್ಬ್ ಮಾಡಲು ಹೋಗಲಿಲ್ಲ. ಅಭಿಮಾನಿಗಳು ಕೂಡ ಮೌನವಾಗಿದ್ದರು. ಆದರೆ, ಅಣ್ಣಾವ್ರು ಅಭಿನಯಿಸದೆ ಎರಡು ವರ್ಷಗಳು ಕಳೆದಾಗ ಗುಸುಗುಸು ಶುರುವಾಯಿತು. ಅಭಿಮಾನಿಗಳು ರೊಚ್ಚಿಗೆದ್ದರು. ಅದರಲ್ಲೂ ರಾಜ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳ ಗಲಾಟೆ ತಾರಕಕ್ಕೇರಿತು.

‘ಪರಶುರಾಮ’ ಚಿತ್ರದ ನಂತರ ಸೆಟ್ಟೇರಬೇಕಾಗಿದ್ದ ‘ಮನಸು ಮಲ್ಲಿಗೆ’ ಚಿತ್ರದ ಕೆಲಸ ಸ್ಥಗಿತಗೊಂಡಿತ್ತು. ಯಾರು ಕೇಳಿದರೂ ರಾಜ್ ಅವರದ್ದು ಒಂದೇ ಉತ್ತರ; ‘ಎಲ್ಲ ಅವನಿಚ್ಛೆ. ಅವನು ಮನಸ್ಸು ಮಾಡಿದಾಗ ನಾನು ನಟಿಸುತ್ತೇನೆ. ನಾವೆಲ್ಲ ಅವನು ಆಡಿಸಿದಂತೆ ಆಡೋ ಬೊಂಬೆ ಅಲ್ವಾ?’- ಎಂದು ಹೇಳುವುದು ಮಾಮೂಲಾಯಿತು! ಇದನ್ನು ಕೇಳಿ ಬೇಸತ್ತ ಅಭಿಮಾನಿಗಳು 1990ರ ಏ.24ರಂದು ನಡೆದ ರಾಜಣ್ಣನ ಜನ್ಮದಿನಾಚರಣೆಯಂದು ಸದಾಶಿವನಗರದ ಮನೆಗೆ ಲಗ್ಗೆ ಹಾಕಿ ಗಲಾಟೆಯನ್ನೇ ಮಾಡಿದರು.

ಕೆಲವರು ಕೈ ಕುಯ್ದುಕೊಂಡರು, ಮತ್ತೆ ಕೆಲವರು ತೆಂಗಿನಕಾಯಿಯಿಂದ ತಲೆಗೆ ಹೊಡೆದು ರಕ್ತ ಬರಿಸಿಕೊಂಡರು! ಆಗ ರಾಜ್​ಕುಮಾರ್ ಅವರಿಗೆ ಅಭಿಮಾನಿಗಳ ಬೇಡಿಕೆಯ ಗಂಭೀರತೆ ಏನೂಂತ ಗೊತ್ತಾಯಿತು!

ಅಂದೇ ಒಂದು ನಿರ್ಧಾರಕ್ಕೆ ಬಂದರು ರಾಜಣ್ಣ. ಸದಾಶಿವನಗರದ ತಮ್ಮ ಮನೆಯ ಮಹಡಿಗೆ ಬಂದು ಅಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳಿಗೆ ಕೈ ಬೀಸುತ್ತ್ತ ಹೇಳಿದರು; ‘ಖಂಡಿತ ಸಿನಿಮಾ ಮಾಡ್ತೀನಿ. ನಿಮ್ಮನ್ನು ಬಿಟ್ರೆ ನಂಗೆ ಯಾರಿದ್ದಾರೆ ಹೇಳಿ? ಅವನಿಚ್ಛೆ ಅಂದಿದ್ದೆ. ಅದು ನಿಮ್ಮಿಚ್ಛೆಯೂ ಹೌದು. ದಯವಿಟ್ಟು ಇನ್ನಾದ್ರೂ ರಕ್ತ ಹರಿಸೋದನ್ನು ನಿಲ್ಲಿಸಿ…’- ಎಂದು ಬಹಿರಂಗವಾಗಿ ಘೊಷಿಸಿದ ರಾಜ್ ಮನೆ ಒಳಹೊಕ್ಕು ಮತ್ತೆ ತಾವು ನಟಿಸಲು ನಿರ್ಧರಿಸಿರುವ ವಿಷಯವನ್ನು ಮನೆ ಮಂದಿಗೆ ತಿಳಿಸಿದರು. ಹೊರಗೆ ಮತ್ತು ಒಳಗೆ ದೊಡ್ಡ ಹಷೋದ್ಗಾರ!

ಮುಂದಿನ ಶುಕ್ರವಾರವೇ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟವಾಯಿತು; ಡಾ. ರಾಜ್​ಕುಮಾರ್ ನಟಿಸುವ ಚಿತ್ರ ‘ಜೀವನಚೈತ್ರ’. ಈ ಹಿಂದೆ ಯಾವ ಚಿತ್ರಕ್ಕೆ ‘ಮನಸು ಮಲ್ಲಿಗೆ’ ಎಂಬ ಹೆಸರಿಡಲಾಗಿತ್ತೋ ಅದೇ ಚಿತ್ರಕ್ಕೆ ಮರುನಾಮಕರಣ ಮಾಡಿ ‘ ಜೀವನ ಚೈತ’ ಎಂದು ಕರೆಯಲಾಯಿತು ಮೊಟ್ಟಮೊದಲ ಬಾರಿಗೆ ನಟಿಸುತ್ತಿದ್ದಾರೇನೋ ಎಂಬಂತೆ ಅಣ್ಣಾವ್ರಿಗೆ ಮೇಕಪ್ ಮಾಡಿಸಿ ಛಾಯಾಗ್ರಾಹಕ ಪ್ರವೀಣ್ ನಾಯಕ್ ಅವರಿಂದ ಪೋಟೋಶೂಟ್ ಮಾಡಿಸಲಾಯಿತು! ವಿಶೇಷ ಮೇಕಪ್ ಮಾಡಿಸಲೆಂದೇ ಚೆನ್ನೈನಿಂದ ದೊರೆಸ್ವಾಮಿ ನಾಯ್ಡು ಅವರನ್ನು ಕರೆಸಲಾಯಿತು. ಮೊದಲೇ ಗೊತ್ತುಪಡಿಸಿರುವಂತೆ ದೊರೈ- ಭಗವಾನ್ ಜೋಡಿ ನಿರ್ದೇಶನಕ್ಕೆ ತಯಾರಾದರು.

ಪಾರ್ವತಮ್ಮ ರಾಜ್​ಕುಮಾರ್ ನಿರ್ವಣದ ಜವಾಬ್ದಾರಿ ಹೊತ್ತ ಈ ಚಿತ್ರದ ನಾಯಕಿಯಾಗಿ ಮಾಧವಿ ಆಯ್ಕೆಯಾಗಿದ್ದರು. ರಾಜಣ್ಣನ ಪ್ರೀತಿಯ ಕಲಾವಿದರಾದ ಅಶ್ವತ್ಥ್, ಪಂಡರೀಬಾಯಿ, ಸುಧಾರಾಣಿ, ತೂಗುದೀಪ ಶ್ರೀನಿವಾಸ್, ಗುರುದತ್, ಅಭಿಜಿತ್, ಬಾಲರಾಜ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಸಂಗೀತ ನೀಡಲು ಉಪೇಂದ್ರಕುಮಾರ್ ತಯಾರಾದರು. ಛಾಯಾಗ್ರಹಣದ ಕೆಲಸವನ್ನು ಶ್ರೀಕಾಂತ್ ಅವರಿಗೆ ಒಪ್ಪಿಸಲಾಯಿತು. ಚಿ.ಉದಯಶಂಕರ್ ಇಲ್ಲವಾದ್ರೆ ರಾಜಣ್ಣನ ಚಿತ್ರ ಮುಹೂರ್ತ ಮಾಡಿಸಿಕೊಳ್ಳುವುದುಂಟಾ? ಚಿತ್ರಕಥೆ, ಸಂಭಾಷಣೆ, ಗೀತರಚನೆಯ ಕೆಲಸವನ್ನು ಉದಯ್ಶಂಕರ್ ಅವರು ಎಂದಿನ ನಿಷ್ಠೆಯಿಂದ ಮಾಡಿದರು. 1992ರಲ್ಲಿ ‘ಜೀವನ ಚೈತ್ರ’ ಚಿತ್ರ ಬಿಡುಗಡೆಯಾಯಿತು.ಆ ಚಿತ್ರ ತೆರೆಕಂಡು ಆಗಲೇ 26 ವರ್ಷಗಳಾಗಿವೆ. ದಾಖಲೆ ಮೇಲೆ ದಾಖಲೆ ಬರೆದ ಈ ಚಿತ್ರ ನಿಜವಾದ ಅರ್ಥದಲ್ಲಿ ಅಣ್ಣಾವ್ರ ಕಿರೀಟಕ್ಕೆ ಹೊಸ ಗರಿ ಸೇರಿಸಿತು.

ತುಂಬು ಕುಟುಂಬದ ಜವಾಬ್ದಾರಿಯುತ ತಂದೆಯಾಗಿ ರಾಜ್​ಕುಮಾರ್ ವಿಜೃಂಭಿಸಿದ ಪಾತ್ರವದು. ಅವರ ವಯಸ್ಸು ಮತ್ತು ಅಭಿನಯ ಗಾಂಭೀರ್ಯಕ್ಕೆ ಹೊಂದುವಂತಿತ್ತು. ಸಮಾಜದ ಬದಲಾಗುತ್ತಿರುವ ಮೌಲ್ಯಗಳಿಗೆ ಸಂಕೇತವಾಗಿದ್ದ ಕಥಾವಸ್ತುವಿನಲ್ಲಿ ಮದ್ಯಪಾನ ನಿಷೇಧದ ಬಗ್ಗೆಯೂ ಹೇಳಲಾಗಿತ್ತು. ಕೆಟ್ಟ ಮಕ್ಕಳಿಗೆ ಪ್ರೀತಿ, ಮಮತೆ, ವಾತ್ಸಲ್ಯವನ್ನು ಮನಗಾಣಿಸುವಂಥ ದೃಶ್ಯಗಳು ಜೀವಂತವಾಗಿ ಮೂಡಿ ಬಂದಿದ್ದವು.

ರಾಜ್ಯದ ಒಟ್ಟು 30 ಕೇಂದ್ರಗಳ 26 ಚಿತ್ರಮಂದಿರಗಳಲ್ಲಿ ಶತದಿನ ಆಚರಿಸಿದ್ದು ಈ ಚಿತ್ರದ ದಾಖಲೆ. ಬೆಂಗಳೂರಿನ 6 ಚಿತ್ರಮಂದಿರಗಳಲ್ಲಿ 4 ಪ್ರದರ್ಶನ, 10 ಚಿತ್ರಮಂದಿರಗಳಲ್ಲಿ 3 ಪ್ರದರ್ಶನ, 3 ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಪ್ರದರ್ಶನದಂತೆ 100 ದಿನ ಪ್ರದರ್ಶಿತವಾಗಿದ್ದೂ ಸಹ ದಾಖಲೆಯೇ ಸರಿ! ಒಂದು ಉತ್ತಮ ಚಿತ್ರ ಸಮಾಜದ ಮೇಲೆ, ಜನರ ಮನಸ್ಸಿನ ಮೇಲೆ ಪರಿಣಾಮ ಬೀರಲು ಸಾಧ್ಯವಿದೆ ಎಂಬುದನ್ನು ಸಾಧಿಸಿ ತೋರಿಸಿತು ‘ಜೀವನ ಚೈತ್ರ’.

ಈ ಚಿತ್ರ ಬಿಡುಗಡೆಯಾದ ಹೊಸದರಲ್ಲಿ ರಾಜ್​ಕುಮಾರ್ ಅವರು ತಮ್ಮ ಬಂಧುವೊಬ್ಬರ ಮದ್ಯ ತಯಾರಿಕಾ ಕಾರ್ಖಾನೆಯೊಂದನ್ನು ಉದ್ಘಾಟಿಸಬೇಕಿತ್ತು. ಪತ್ರಿಕೆಗಳಲ್ಲಿ ಈ ಬಗೆಗಿನ ಜಾಹೀರಾತು ಕೂಡ ಪ್ರಕಟವಾಗಿತ್ತು. ಆದರೆ, ‘ಜೀವನ ಚೈತ್ರ’ ಚಿತ್ರದಿಂದ ಪ್ರಭಾವಿತರಾಗಿದ್ದ ಅಭಿಮಾನಿಗಳ ಒತ್ತಾಯದಿಂದಾಗಿ ಅಣ್ಣಾವ್ರು ಉದ್ಘಾಟನೆಗೆ ಹೋಗಲಿಲ್ಲ ಎಂಬುದು ಉಲ್ಲೇಖಾರ್ಹ ಸಂಗತಿ. ಈ ಚಿತ್ರದಲ್ಲಿ ಬಳಸಿರುವ ‘ನಾದಮಯ..’ ಹಾಡನ್ನು ಹಾಡಿರುವ ರಾಜ್​ಕುಮಾರ್ ಅವರಿಗೆ 1992ರ ಸಾಲಿನ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಇದಲ್ಲದೆ, ರಾಜಕುಮಾರ್ ಅವರಿಗೆ ಅತ್ಯುತ್ತಮ ನಟ, ಉಪೇಂದ್ರಕುಮಾರ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ, ಚಿ. ಉದಯಶಂಕರ್ ಅವರಿಗೆ ಅತ್ಯುತ್ತಮ ಸಂಭಾಷಣಾಕಾರ ಮತ್ತು ‘ಜೀವನ ಚೈತ್ರ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಲಭ್ಯವಾಯಿತು. ಒಟ್ಟಿನಲ್ಲಿ

ಈ ಚಿತ್ರ ಬರೀ ಜನಮನ್ನಣೆ ಮಾತ್ರವಲ್ಲ, ಪ್ರಶಸ್ತಿಗಳ ಜತೆಗೆ ಹಣದ ವಿಚಾರದಲ್ಲೂ ನಿರ್ವಪಕರ ಜೇಬು ತುಂಬಿಸಿದ್ದು ಸುಳ್ಳಲ್ಲ.

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top