ರಾಣಿ ಹೊನ್ನಮ್ಮನಾಗಿ ಮಿಂಚಿದ ಲೀಲಾವತಿ

1960ರಲ್ಲಿ ತೆರೆಕಂಡ ‘ರಾಣಿ ಹೊನ್ನಮ್ಮ’ ಸಿನಿಮಾ ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರಗಳಲ್ಲೊಂದು. ರಾಣಿ ಹೊನ್ನಮ್ಮನ ಪಾತ್ರದಲ್ಲಿ ಲೀಲಾವತಿ ನಟಿಸಿದ್ದರು. ಈ ನಾಯಕಿ ಪ್ರಧಾನ ಚಿತ್ರದಲ್ಲಿ ನಾಯಕನಾಗಿ ಡಾ. ರಾಜ್​ಕುಮಾರ್ ನಟಿಸಿದ್ದರು. ಇತರ ಪಾತ್ರವರ್ಗದಲ್ಲಿ ಬಾಲಕೃಷ್ಣ, ನರಸಿಂಹರಾಜು, ಜಿ.ವಿ. ಅಯ್ಯರ್, ಗುಗ್ಗು ಮೊದಲಾದವರಿದ್ದರು. ಕಥೆ, ಚಿತ್ರಕಥೆ, ಸಂಭಾಷಣೆ, ಗೀತೆರಚನೆ ಮತ್ತು ನಿರ್ದೇಶನ ಕು.ರ.ಸೀ. ಅವರದ್ದು. ಅವರ ಬಗ್ಗೆ ನಾಲ್ಕು ಮಾತು ಹೇಳಲೇಬೇಕು. ಹೌದು, ಕು.ರ.ಸೀ ಎಂದರೆ ಏನು? ಈಗಿನ ಪೀಳಿಗೆಯ ಯುವಜನಾಂಗಕ್ಕೆ ಇದು ಮಿಲಿಯನ್ ಡಾಲರ್ ಪ್ರಶ್ನೆ! ಆದರೆ, ಉತ್ತರ ಸುಲಭ; ಕುಮಾರಸ್ವಾಮಿ ರವಿ ಸೀತಾರಾಮ ಶಾಸ್ತ್ರಿ!

‘ಗುಣಸಾಗರಿ’ ಚಿತ್ರದ ನಿರ್ಮಾಣ ಹಂತದಲ್ಲಿ ಕು.ರ.ಸೀ. ಅವರು ಎಚ್.ಎಲ್.ಎನ್. ಸಿಂಹ ಅವರ ಸಹಾಯಕರಾಗಿದ್ದವರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿಂಹ ಅವರ ಬಲಗೈ ಬಂಟರಾಗಿದ್ದವರು! ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಗೀತೆರಚನೆಯಲ್ಲಿ ಅವರನ್ನು ಮೀರಿಸುವವರಿರಲಿಲ್ಲ. ಹೀಗಾಗಿಯೇ ಈ ಕು.ರ.ಸೀ ಮೇಲೆ ಕಣ್ಣು ಬಿದ್ದದ್ದು ಒಬ್ಬ ಹಾಲಿವುಡ್ ನಿರ್ದೇಶಕರದ್ದು! ‘ಗುಣಸಾಗರಿ’ ಚಿತ್ರದ ಚಿತ್ರೀಕರಣ ನಡೆದಿದ್ದಾಗ ಅಲ್ಲಿಗೆ ಆಗಮಿಸಿದ ಹಾಲಿವುಡ್​ನ ಷಾ ಸೋದರರು ಕು.ರ.ಸೀ ಅವರ ಕೆಲಸದ ಆಳ-ಅಗಲವನ್ನು ಕಣ್ಣಾರೆ ಕಂಡು ಬೆರಗುಗೊಂಡರು. ಅಷ್ಟೇ ಅಲ್ಲ, ತಾವು ಹಿಂದಿರುಗುವ ಮೊದಲೇ ಕು.ರ.ಸೀ ಯವರನ್ನು ತಮ್ಮ ಹಾಂಗ್​ಕಾಂಗ್ ಘಟಕಕ್ಕೆ ಸೇರಿಸಿಕೊಂಡರು. ಆ ಘಟಕ ಚಿತ್ರ ತಯಾರಿಕಾ ಕಾರ್ಖಾನೆಯಿದ್ದಂತೆ! ಕೆಲಸ ಕಲಿಯುವ ಆತುರದಲ್ಲಿ ಕು.ರ.ಸೀ. ಹಾಂಗ್​ಕಾಂಗ್​ಗೆ ಹಾರಿಯೇ ಬಿಟ್ಟರು. ಅಲ್ಲಿ ಅವರ ಸಂಪರ್ಕಕ್ಕೆ ಬಂದದ್ದು ಮಲಯ್ ಭಾಷೆಯ ಚಿತ್ರರಂಗ. ದೇಶ, ಭಾಷೆ ಯಾವುದಾದರೇನು ಕಲೆಗೆ ಗಡಿಯಿಲ್ಲ ಎಂಬುದನ್ನು ಅರಿತಿದ್ದ ಕು.ರ.ಸೀ. ಹಾಂಗ್​ಕಾಂಗ್​ನಲ್ಲಿ ಚಿತ್ರ ನಿರ್ವಣಕ್ಕೆ ಸಂಬಂಧಿಸಿದಂತೆ ಏನೇನು ಕಲಿಯಬೇಕಾಗಿತ್ತೋ ಅಷ್ಟನ್ನೂ ಕಲಿತರು. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಎರಡು ಮಲಯ್ ಭಾಷಾ ಚಿತ್ರಗಳನ್ನು ನಿರ್ದೇಶಿಸಿದರು! 1953ರಲ್ಲಿ ‘ಕುರಾನಾ ಕಾವ್’ ತೆರೆಕಂಡರೆ, 1954ರಲ್ಲಿ ‘ಈಮಾನ್’ ತೆರೆಕಂಡಿತು. ಇವೆರಡು ಚಿತ್ರಗಳು ಕು.ರ.ಸೀ. ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಆದರೆ ದುರಾದೃಷ್ಟವಶಾತ್ ಅಲ್ಪ ಕಾಲದಲ್ಲಿಯೇ ಆ ದೇಶ ಬಿಟ್ಟು ಭಾರತಕ್ಕೆ ಬರಬೇಕಾಯಿತು. ಕು.ರ.ಸೀ. ಅವರ ತಂದೆ ಕಾಯಿಲೆ ಬಿದ್ದು ತೀರಿಕೊಂಡಾಗ ಅನಿವಾರ್ಯವಾಗಿ ಸಂಸಾರದ ಜವಾಬ್ದಾರಿಯನ್ನು ಅವರೇ ಹೊರಬೇಕಾಯಿತು.

ಹಾಗೆ ಭಾರತಕ್ಕೆ ಹಿಂದಿರುಗಿದಾಗ ಅವರ ಕೈಯಲ್ಲೊಂದು ಕಥೆಯಿತ್ತು. ಈ ಕಥೆಯನ್ನು ತಮ್ಮ ಮೂರನೇ ಚಿತ್ರವಾಗಿ ಮಲಯ್ ಭಾಷೆಯಲ್ಲೇ ಚಿತ್ರಿಸಲು ಹೊರಟಿದ್ದರು ಕು.ರ.ಸೀ. ಆದರೆ ಅವಸರದಲ್ಲಿ ಭಾರತಕ್ಕೆ ಬಂದ ಅವರು ಅದೇ ಕಥೆಯನ್ನು ಬದಲಾಯಿಸಿ ಕನ್ನಡದಲ್ಲಿ ನಿರ್ದೇಶಿಸಲು ಹೊರಟರು. ಆ ಚಿತ್ರವೇ ‘ರಾಣಿ ಹೊನ್ನಮ್ಮ’. ಎಲ್ಲವೂ ರೆಡಿ. ಆದರೆ ನಿರ್ವಪಕರೆಲ್ಲಿ? ತಾವೇ ಪೂರ್ತಿಯಾಗಿ ಬಂಡವಾಳ ಹೂಡುವಷ್ಟು ಶ್ರೀಮಂತರಾಗಿರಲಿಲ್ಲ ಕು.ರ.ಸೀ. ಅವರು ಲಕ್ಷ್ಮೀಪುತ್ರರಲ್ಲ, ಸರಸ್ವತೀಪುತ್ರರು! ಆಗ ಅವರ ಜತೆಯಾದವರೇ ಕಂಠೀರವ ಸ್ಟುಡಿಯೋ ಸ್ಥಾಪಕರಲ್ಲೊಬ್ಬರಾದ ಟಿ.ಎಸ್. ಕರಿಬಸವಯ್ಯನವರು. ಹೀಗಾಗಿ ಈ ಸರಸ್ವತೀಪುತ್ರನಿಗೆ ಆ ಲಕ್ಷ್ಮೀಪುತ್ರನ ಸಹಕಾರ ಸಿಕ್ಕಿತು. ಹಾಗೆ ಸ್ಥಾಪನೆಯಾದದ್ದೇ ‘ಗಿರಿಜಾ ಪೊ›ಡಕ್ಷನ್ಸ್’ ನಿರ್ಮಾಣ ಸಂಸ್ಥೆ. ಈ ಲಾಂಛನದಲ್ಲಿ ತಯಾರಾದ ‘ರಾಣಿ ಹೊನ್ನಮ್ಮ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗದಿದ್ದರೂ ಆ ಕಾಲದಲ್ಲಿ ಒಂದು ಮಟ್ಟಿಗಿನ ಜನಪ್ರಿಯತೆ ಪಡೆದುಕೊಂಡಿತು. 1960ರಲ್ಲಿ ತೆರೆಕಂಡ ಈ ಚಿತ್ರಕ್ಕೆ ಪೈಪೋಟಿ ಕೊಟ್ಟ ಇತರ ಚಿತ್ರಗಳೆಂದರೆ : ರಣಧೀರ ಕಂಠೀರವ, ಭಕ್ತ ಕನಕದಾಸ, ಮಕ್ಕಳ ರಾಜ್ಯ, ದಶಾವತಾರ. ಆ ವರ್ಷ ತೆರೆಕಂಡ ಚಿತ್ರಗಳ ಸಂಖ್ಯೆ ಒಟ್ಟು ಏಳು. ಈ ಏಳರಲ್ಲಿ ನಾಲ್ಕು ಚಿತ್ರಗಳಲ್ಲಿ ರಾಜ್​ಕುಮಾರ್ ಹೀರೋ. ಆ ಕಾಲದಲ್ಲಿ ಬಹುಬೇಡಿಕೆಯ ನಾಯಕನಟರಾಗಿದ್ದರು ರಾಜ್​ಕುಮಾರ್. ‘ರಾಣಿ ಹೊನ್ನಮ್ಮ’ ಚಿತ್ರ ದೊಡ್ಡ ಹೆಸರು ಮಾಡಲು ಕಾರಣವಾದ ಮತ್ತೊಂದು ಅಂಶವೆಂದರೆ ಅದರ ಹಾಡುಗಳು. ಈ ಚಿತ್ರದಲ್ಲಿ ಒಟ್ಟು ಒಂಭತ್ತು ಹಾಡುಗಳಿದ್ದವು. ವಿಜಯಭಾಸ್ಕರ್ ಸಂಗೀತ ನೀಡಿರುವ ಎಲ್ಲ ಹಾಡುಗಳು ಗಮನ ಸೆಳೆದರೂ ಮುಖ್ಯವಾಗಿ ಹಿಟ್ ಎನಿಸಿಕೊಂಡ ಹಾಡುಗಳೆಂದರೆ : ‘ಹಾರುತ ದೂರಾ ದೂರಾ..’, ‘ಬಾರಾ ನೀರಾ ಮಂದಾರ..’ ಮತ್ತು ‘ಜೀವನ ಹೂವಿನ ಹಾಸಿಗೆ…’