ವಿಎಸ್‌ಕೆ ವಿವಿಯಲ್ಲಿ ಹೊಸ ಎರಡು ಕೋರ್ಸ್

ಕನ್ನಡ ಅಧ್ಯಯನ ವಿಭಾಗದಿಂದ ಪ್ರದರ್ಶನ ಕಲೆ, ಎಂಇಡಿ |ವಿದ್ಯಾ ವಿಷಯಕ ಪರಿಷತ್ ಸಭೆಯಲ್ಲಿ ಅನುಮೋದನೆ |ವಿವಿ ಅಧೀನ ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರ ಆರಂಭ ಕುರಿತು ಪ್ರಸ್ತಾಪ

ಬಳ್ಳಾರಿ: ವಿಎಸ್‌ಕೆ ವಿವಿ ಕನ್ನಡ ಅಧ್ಯಯನ ವಿಭಾಗದಿಂದ ಸ್ನಾತಕೋತ್ತರ ಪದವಿಯಲ್ಲಿ ಪ್ರದರ್ಶನ ಕಲೆ ಹಾಗೂ ಎಂಇಡಿ ಎಂಬ ಎರಡು ಹೊಸ ಕೋರ್ಸ್ ಆರಂಭಿಸಲು ನಗರದ ವಿವಿ ಅತಿಥಿ ಗೃಹದಲ್ಲಿ ಮಂಗಳವಾರ ಕರೆದಿದ್ದ ವಿದ್ಯಾ ವಿಷಯಕ ಪರಿಷತ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ವಿವಿ ಪ್ರಭಾರ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಿವಿ ಅಧೀನ ಕಾಲೇಜುಗಳಲ್ಲಿ ಪಿಎಚ್.ಡಿ ಸಂಶೋಧನಾ ಕೇಂದ್ರ ಆರಂಭಿಸುವ ಕುರಿತು ಪ್ರಸ್ತಾಪಿಸಲಾಯಿತು. ಈ ಸಂಬಂಧ ಮೊದಲು ಡೀನ್‌ಗಳ ಸಭೆ ಕರೆದು ಸಾಧಕ-ಬಾಧಕ ಪರಾಮರ್ಶಿಸಬೇಕು. ನಂತರ ಜ್ಯೇಷ್ಠತೆ ಆಧಾರದ ಮೇಲೆ ಹಾಗೂ ಕನಿಷ್ಠ ಐದು ವರ್ಷ ಶೈಕ್ಷಣಿಕ ಸಾಧನೆ ಪರಿಶೀಲಿಸಿ ಸಂಶೋಧನಾ ಕೇಂದ್ರ ಆರಂಭಕ್ಕೆ ಅನುಮತಿ ನೀಡಲು ತೀರ್ಮಾನಿಸಲಾಯಿತು.

ವಿವಿ ಅಧೀನದ ಕೆಲ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪರಿಷತ್ ಸದಸ್ಯ ಬಸವರಾಜ ಮಳಿಮಠ ಸಭೆ ಗಮನಕ್ಕೆ ತಂದರು. ಇದಕ್ಕೆ ಕುಲಸಚಿವೆ ಪ್ರೊ.ಬಿ.ಕೆ.ತುಳಸಿಮಾಲಾ ಪ್ರತಿಕ್ರಿಯಿಸಿ, ವಿವಿ ಅಧೀನದಲ್ಲಿರುವ ಎಲ್ಲ ಕಾಲೇಜುಗಳಿಗೆ ಕೂಡಲೇ ಸುತ್ತೋಲೆ ಹೊರಡಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದರು.

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದೂರಶಿಕ್ಷಣ ಕೇಂದ್ರ ಆರಂಭಿಸಲು ಅನುಮತಿ ನೀಡುವಂತೆ ವಿವಿಗೆ ಕುವೆಂಪು ವಿವಿ ಪತ್ರ ಬರೆದ ಕುರಿತು ಚರ್ಚಿಸಲಾಯಿತು. ಶೈಕ್ಷಣಿಕ ಹಿತದೃಷ್ಟಿಯಿಂದ ಬಳ್ಳಾರಿ ವಿವಿ ಮುಂಬರುವ ಕೆಲದಿನಗಳಲ್ಲಿ ದೂರ ಶಿಕ್ಷಣ ಅಧ್ಯಯನವನ್ನು ಸ್ವತಃ ಪರಿಚಯಿಸಲು ಮುಂದಾಗಲಿದೆ. ಹೀಗಾಗಿ ಕುವೆಂಪು ವಿವಿಗೆ ಅನುಮತಿ ನೀಡದಿರುವುದು ಸೂಕ್ತ ಎಂದು ಸಭೆ ನಿರ್ಧರಿಸಿತು.

ಕುಲಸಚಿವೆ ಬಿ.ಕೆ.ತುಳಸಿಮಾಲಾ, ಕುಲಸಚಿವ(ಮೌಲ್ಯಮಾಪನ) ಪ್ರೊ.ರಮೇಶ ಕುಮಾರ ಕೆ., ಸದಸ್ಯರಾದ ಪ್ರೊ.ಭೀಮನಗೌಡ ಪಾಟೀಲ್, ಪ್ರೊ.ಶಾಂತಾನಾಯ್ಕೊ, ಪ್ರೊ.ಕೆ.ಎಸ್.ಲೋಕೇಶ್, ಪ್ರೊ.ಕೆ.ಎಂ. ಬಸವರಾಜ್, ಪ್ರೊ.ವೆಂಕಟೇಶಯ್ಯ, ಬಸವರಾಜ ಮಳಿಮಠ, ವಿದ್ಯಾರ್ಥಿ ಪ್ರತಿನಿಧಿಗಳು ಇತರರಿದ್ದರು.

ಬಿಇ ಪದವೀಧರರಿಗೆ ಅವಕಾಶ : ಖನಿಜ ಸಂಸ್ಕರಣಾ ಅಧ್ಯಯನ ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶದ ನಿಯಮಗಳಲ್ಲಿ ಬದಲಾವಣೆ ಕಲ್ಪಿಸಿದ್ದು, ಬಿಇ (ತಾಂತ್ರಿಕ ಶಿಕ್ಷಣ) ಪದವಿ ಪಡೆದ ವಿದ್ಯಾರ್ಥಿಗಳು ನೇರವಾಗಿ 3ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಬಹುದು. ಈ ಕುರಿತ ಅಧಿಸೂಚನೆ ಶೀಘ್ರ ವಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ವಿವಿ ಪ್ರಭಾರ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ ರೆಡ್ಡಿ ತಿಳಿಸಿದರು. ಕೊಪ್ಪಳ ಮತ್ತು ಗಂಗಾವತಿಯಲ್ಲಿ ಎರಡು ನೂತನ ಕಾಲೇಜುಗಳಿಗೆ ಸಂಯೋಜನೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಳ್ಳಾರಿಯ ಬಿಐಟಿಎಂ ಕಾಲೇಜಿನಲ್ಲಿರುವ ಬಿಕಾಂ ಮತ್ತು ಬಿಬಿಎ ಕೋರ್ಸ್‌ಗೆ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಳಕ್ಕೆ ಸಲ್ಲಿಸಿದ್ದ ಅಂಶ ಅಂಗೀಕರಿಸಲಾಯಿತು.

Leave a Reply

Your email address will not be published. Required fields are marked *