ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

ಎಡಿಸಿ ಸತೀಶಕುಮಾರ್ ಸಲಹೆ | ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಇಲಾಖೆಯಿಂದ ಮತದಾನ ಜಾಗೃತಿ ವಸ್ತುಪ್ರದರ್ಶನ

ಬಳ್ಳಾರಿ: ಮತದಾನ ಅಮೂಲ್ಯವಾಗಿದ್ದು, ಅದನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಸತೀಶಕುಮಾರ್ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ನಮಗೆ ಕಲ್ಪಿಸಿರುವ ಅಮೂಲ್ಯ ಅವಕಾಶವನ್ನು ತಪ್ಪಿಸಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತಚಲಾಯಿಸಬೇಕು ಎಂದು ಹೇಳಿದರು.

ಮತದಾನ ಜಾಗೃತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತದಾನದ ಮಹತ್ವ, ಚುನಾವಣಾ ಅಕ್ರಮ ತಡೆಗೆ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳು, ಮತಗಟ್ಟೆಗೆ ತೆರಳಲು ಬೇಕಾದ ದಾಖಲೆಗಳು, ಚುನಾವಣಾ ರಾಯಭಾರಿಗಳ ಸಂದೇಶಗಳನ್ನು ವಸ್ತುಪ್ರದರ್ಶನದ ಬಿತ್ತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ತಿಳಿಸಿದರು.

ಜಿಪಂ ಸಿಇಒ ಚಂದ್ರಶೇಖರ ಗುಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಮಾತನಾಡಿದರು. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ, ಸಣ್ಣ ಉಳಿತಾಯ ಇಲಾಖೆ ಅಭಿವೃದ್ಧಿ ಅಧಿಕಾರಿ ಹೊನ್ನೂರಪ್ಪ, ಶಿವರಾಜ್, ವಾರ್ತಾ ಇಲಾಖೆ ಅಧೀಕ್ಷಕ ಗುರುರಾಜ ಇತರರು ಇದ್ದರು.

Leave a Reply

Your email address will not be published. Required fields are marked *