ಮತ ಎಣಿಕೆ ದಿನವೇ ವಿಎಸ್‌ಕೆ ವಿವಿ ಬೋಧಕೇತರ ಹುದ್ದೆಗೆ ಪರೀಕ್ಷೆ, ಗೊಂದಲದಲ್ಲಿ ಅಭ್ಯರ್ಥಿಗಳು

ಬಳ್ಳಾರಿ: ವಿಎಸ್‌ಕೆ ವಿವಿಯ ಬೋಧಕ ಹುದ್ದೆಗಳ ನೇಮಕ ಪ್ರಕ್ರಿಯೆಗೆ ನಾನಾ ಅಡೆತಡೆಗಳ ಬಳಿಕ ಮತ್ತೆ ಚಾಲನೆ ಸಿಕ್ಕಿದೆ. ಆದರೆ, ಬೋಧಕೇತರ ಹುದ್ದೆಗಳಿಗೆ ಮತ ಎಣಿಕೆ ದಿನವೇ ಪರೀಕ್ಷೆ ನಿಗದಿಪಡಿಸಿರುವುದು ಸೇವಾನಿರತ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಚುನಾವಣಾ ಕರ್ತವ್ಯ ಇಲ್ಲವೇ ಪರೀಕ್ಷೆ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಸಂದಿಗ್ಧತೆಗೆ ಸಿಲುಕಿದ್ದಾರೆ.

ವಿವಿಯ 55 ಬೋಧಕೇತರ ಹುದ್ದೆಗಳಿಗೆ ಮೇ 6ರಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ಉಪಕುಲಸಚಿವರ ಹುದ್ದೆಗೆ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಸರ್ಕಾರಿ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ 10 ವರ್ಷಗಳ ಸೇವಾನುಭವ ಆಪೇಕ್ಷಣೀಯ ಎಂದು ತಿಳಿಸಲಾಗಿದೆ. ಸಹಾಯಕ ಕುಲಸಚಿವರ ಹುದ್ದೆಗೆ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಶ್ರೇಣಿ ಜತೆಗೆ ಸರ್ಕಾರಿ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಐದು ವರ್ಷಗಳ ಸೇವಾನುಭವ ಆಪೇಕ್ಷಣೀಯ ಎಂದು ತಿಳಿಸಲಾಗಿದೆ.

ಕಚೇರಿ ಅಧೀಕ್ಷಕರು ಹಾಗೂ ಸಹಾಯಕ ಕಚೇರಿ ಅಧೀಕ್ಷಕರ ಹುದ್ದೆಗೆ ಪದವಿ ಜತೆಗೆ ಜತೆಗೆ ಸರ್ಕಾರಿ ಅಥವಾ ಶೈಕ್ಷಣಿಕ ಸಂಸ್ಥೆಯಲ್ಲಿ ಮೂರು ವರ್ಷಗಳ ಆಡಳಿತ ಅನುಭವ ಆಪೇಕ್ಷಿಸಲಾಗಿದೆ. ಸಹಾಯಕ ಗ್ರಂಥಪಾಲಕ ಗ್ರೇಡ್ 2 ಹುದ್ದೆಗೆ ಲೈಬ್ರರಿ ಮಾಹಿತಿ ವಿಜ್ಞಾನ ಪದವಿ ಜತೆಗೆ ಲೈಬ್ರರಿಯಲ್ಲಿ ಎರಡು ವರ್ಷಗಳ ಸೇವಾನುಭವ ಕೇಳಲಾಗಿದೆ. ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು ಸೇರಿ ಇತರ ವಿವಿಧ ಹುದ್ದೆಗಳಿಗೂ ಈಗಾಗಲೇ ಸರ್ಕಾರಿ ಸೇವೆಯಲ್ಲಿ ಇರುವವರು ಕೂಡ ಅರ್ಜಿ ಸಲ್ಲಿಸಿದ್ದಾರೆ.

ಲೋಕಸಭಾ ಚುನಾವಣೆಯ ಮತ ಎಣಿಕೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ವಿಎಸ್‌ಕೆ ವಿವಿಯ ಬೋಧಕೇತರ ಹುದ್ದೆಗಳಿಗೆ ಪರೀಕ್ಷೆ ನಿಗದಿಪಡಿಸಿರುವುದರಿಂದ ಸೇವಾನಿರತ ಅಭ್ಯರ್ಥಿಗಳು ಏನು ಮಾಡಬೇಕು ಎಂದು ತೋಚದ ಸ್ಥಿತಿಯಲ್ಲಿದ್ದಾರೆ. ಚುನಾವಣಾ ಕರ್ತವ್ಯದತ್ತ ಗಮನ ಹರಿಸಿದರೆ ಶೈಕ್ಷಣಿಕ ವಿದ್ಯಾರ್ಹತೆಗೆ ಅನುಗುಣವಾದ ಹುದ್ದೆ ಕೈ ಜಾರಲಿದೆ ಎಂಬ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ದಿನಾಂಕ ಮುಂದೂಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ
ಮೇ 23ರಂದು ಉಪಕುಲಸಚಿವ, ಸಹಾಯಕ ಕುಲಸಚಿವ, ಕಚೇರಿ ಅಧೀಕ್ಷಕರು ಸೇರಿ ಇತರ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಿಗದಿಪಡಿಸಲಾಗಿದೆ. ಮೇ 23ರಂದೇ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ ಎಂಬುದು ಗಮನಾರ್ಹ. ಮೇ 24 ರಂದು ಎಫ್‌ಡಿಎ, ಎಸ್‌ಡಿಎ ಸೇರಿ ಇತರ ಹುದ್ದೆಗಳಿಗೆ ಪರೀಕ್ಷೆ ಇದೆ. ಜಿಲ್ಲೆಯ ಸಂಡೂರು, ಹಡಗಲಿ, ಹರಪನಹಳ್ಳಿ ಪುರಸಭೆ ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿಗೆ ಚುನಾವಣೆ ಘೋಷಣೆಯಾಗಿದ್ದು, ಮೇ 31ರವರೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈಗಾಗಲೇ ಸೇವೆಯಲ್ಲಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆದು ಪರೀಕ್ಷೆಗೆ ಹಾಜರಾಗಲಿ. ಪರೀಕ್ಷೆಗೆ ಅನಾನುಕೂಲ ಆಗಲಿದೆ ಎಂಬುದಾದರೆ ಸೇವಾನಿರತ ಅಭ್ಯರ್ಥಿಗಳು ನಮಗೆ ಲಿಖಿತ ಮನವಿ ಸಲ್ಲಿಸಿದರೆ ಪರ್ಯಾಯ ಚಿಂತನೆ ನಡೆಸಲಾಗುವುದು.
| ಎಂ.ಎಸ್.ಸುಭಾಷ್ ವಿಎಸ್‌ಕೆ ವಿವಿ ಕುಲಪತಿ