ಕಾರ್ಯಕರ್ತರೊಂದಿಗೆ ಕಾಲ ಕಳೆದ ಅಭ್ಯರ್ಥಿಗಳು

ಪ್ರಮುಖ ಎದುರಾಳಿಗಳಿಗೆ ಜಯದ ವಿಶ್ವಾಸ ಗೆಲುವಿಗೆ ನಾನಾ ಲೆಕ್ಕಾಚಾರಗಳು

ಬಳ್ಳಾರಿ: ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕಿದೆ. ಅಭ್ಯರ್ಥಿಗಳು ಚುನಾವಣೆ ಮುಗಿಸಿ ನಿರಾಳವಾಗಿದ್ದರೂ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪ್ರಮುಖ ಎದುರಾಳಿಗಳಾಗಿದ್ದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಬುಧವಾರ ಕಾರ್ಯಕರ್ತರೊಂದಿಗೆ ಕಾಲ ಕಳೆದರು.

ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ನಗರದ ಕೋಟೆ ಮಲ್ಲೇಶ್ವರಸ್ವಾಮಿ ಹಾಗೂ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಮೋಕಾ ರಸ್ತೆಯ ಹೋಟೆಲ್‌ನಲ್ಲಿ ಕಾರ್ಯಕರ್ತರ ಜತೆ ಚರ್ಚೆ ನಡೆಸಿದರು. ಭೇಟಿ ಮಾಡಲು ಆಗಮಿಸಿದವರೆಲ್ಲರ ಜತೆ ನಗುಮೊಗದಿಂದಲೇ ಮಾತನಾಡಿದ ದೇವೇಂದ್ರಪ್ಪರಲ್ಲಿ ಗೆಲ್ಲುವ ಆತ್ಮವಿಶ್ವಾಸ ಕಾಣುತ್ತಿತ್ತು. ಚುನಾವಣೆ ಬಳಿಕ ಎಲ್ಲ ಲೆಕ್ಕಾಚಾರ ಆಗಿದ್ದು ಗೆಲುವು ಖಚಿತ ಎಂದು ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಕಾಯಕವೇ ನಮ್ಮನ್ನು ಗುರುತಿಸುತ್ತದೆ. ಕಾಯಿ ಮಾಗಿದರೆ ತುಂಬಾ ಚೆಂದ. ಅದರಂತೆ ಫಲಿತಾಂಶ ಒಂದು ತಿಂಗಳು ವಿಳಂಬವಾದರೂ ಪರವಾಗಿಲ್ಲ. ಸಿಹಿ ಫಲ ಸಿಕ್ಕೇ ಸಿಗುತ್ತದೆ. ನಾನು ಬಸವೇಶ್ವರ ನಗರದಲ್ಲಿ ಮನೆ ಮಾಡಿದ್ದು ಅಲ್ಲೇ ವಾಸಿಸುತ್ತೇನೆ. ಕ್ಷೇತ್ರದಲ್ಲಿ ಕೃಷಿ ನೀರಾವರಿ, ಕೆರೆಗಳ ನಿರ್ಮಾಣ ಸೇರಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯ ಇದೆ. ನಾನು ಸಂಸದನಾದರೆ ಕೆರೆಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲು ಮೊದಲ ಆದ್ಯತೆ ನೀಡುವುದಾಗಿ ದೇವೇಂದ್ರಪ್ಪ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಗುಗ್ಗರಹಟ್ಟಿಯ ಬಾಡಿಗೆ ಮನೆಯಲ್ಲಿ ರಿಲಾಕ್ಸ್ ಮೂಡ್‌ನಲ್ಲಿದ್ದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ದೊಡ್ಡ ಸಂಖ್ಯೆಯಲ್ಲೇ ಸೇರಿದ್ದರು. ಪಕ್ಷದ ಮುಖಂಡರು, ಕಾರ್ಯಕರ್ತರ ಜತೆ ಚರ್ಚೆ ನಡೆಸುತ್ತಲೇ, ಆತ್ಮೀಯರ, ಸ್ನೇಹಿತರ ಮೊಬೈಲ್ ಕರೆಗಳಿಗೆ ಸ್ಪಂದಿಸುತ್ತಾ ಚುನಾವಣೆ ಹಾಗೂ ಗೆಲುವಿನ ಬಗ್ಗೆ ಮಾತನಾಡುತ್ತಿದ್ದುದು ಕಂಡುಬಂತು.

ಹೆತ್ತವರಿಗೆ ಹೆಗ್ಗಣವೇ ಮುದ್ದು ಎನ್ನುವಂತೆ ನನ್ನನ್ನು ಕೇಳಿದರೆ ನಾನೇ ಗೆಲ್ಲುತ್ತೇನೆ ಎಂದು ಹೇಳುತ್ತೇನೆ. ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕ್ಷೇತ್ರದಲ್ಲಿ ಗೋಚರ ಹಾಗೂ ಅಗೋಚರ ಬೆಂಬಲ ವ್ಯಕ್ತವಾಗಿದೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪದಿರುವವರು ನನ್ನ ಕ್ರಿಯಾಶೀಲತೆ ಮೆಚ್ಚಿ ಬೆಂಬಲಿಸಿದ್ದಾರೆ.

ಉಪಚುನಾವಣೆ ಸಂದರ್ಭದಲ್ಲಿ ಉಗ್ರಪ್ಪ ಹಾಗೆ ಹೀಗೆ ಎಂಬ ಅಂತೆ ಕಂತೆಗಳಿದ್ದವು. ಆದರೆ, ಈ ಸಾರ್ವತ್ರಿಕ ಚುನಾವಣೆ ವೇಳೆಗೆ ನಾನು ಹೀಗೆ ಎಂಬುದು ಜನರಿಗೆ ಸ್ಪಷ್ಟವಾಗಿ ಮನವರಿಕೆ ಆಗಿದೆ. ನಾನು ಶೇ.100 ಗೆಲ್ಲುತ್ತೇನೆ ಹಾಗೂ ಕ್ಷೇತ್ರದಲ್ಲೇ ವಾಸ ಮಾಡುತ್ತೇನೆ ಎಂದು ಮಧ್ಯೆ ಮಧ್ಯೆ ಆಕಳಿಸುತ್ತಾ, ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಹೇಳಿದರು.

Leave a Reply

Your email address will not be published. Required fields are marked *