ವಿಮ್ಸ್ ವೈದ್ಯರಿಂದ ಮೊಣಕೈ ಕೀಲು ಮರು ಜೋಡಣೆ

ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಶಸ್ತ್ರಚಿಕಿತ್ಸೆ

ಬಳ್ಳಾರಿ:  ವಿಮ್ಸ್ ವೈದ್ಯರು ಅಪರೂಪದ ಮೊಣಕೈ ಕೀಲು ಮರು ಜೋಡಣೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಮೊಣಕೈ ಕೀಲು ಮರು ಜೋಡಣೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ವಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣ್ ಕುಮಾರ್, ಮುಖ್ಯ ಶಸ್ತ್ರಚಿಕಿತ್ಸಕ ಡಾ.ಎನ್.ಶ್ರೀನಿವಾಸ್ ಹಾಗೂ ಇತರ ವೈದ್ಯರು ಸುದ್ದಿಗೋಷ್ಠಿಯಲ್ಲಿ ಶಸ್ತ್ರ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಚಿತ್ರದುರ್ಗ ಜಿಲ್ಲೆ ಮೊಣಕಾಲ್ಮೂರು ತಾಲೂಕಿನ 53 ವರ್ಷ ಮುಮ್ತಾಜ್‌ಗೆ ಅಪಘಾತದಲ್ಲಿ ಬಲ ಮೊಳಕೈ ಹಾಗೂ ಎಡ ಮುಂಗೈ ಮುರಿದಿತ್ತು. ಮೊಣಕೈ ಕೀಲು ಮರುಜೋಡಣೆ ಹಾಗೂ ಎಡಗೈ ಟ್ರಾನ್ಸ್‌ಕ್ಯೂಟೇನಸ್ ಎಲೆಕ್ಟ್ರಿಕಲ್ ನೆರ್ವ್ ಸ್ಟಿಮ್ಯೂಲೇಷನ್ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆಗೆ ಬಳಸಲಾದ ಉಪಕರಣಕ್ಕೆ 48 ಸಾವಿರ ರೂ. ದರ ಇದೆ. ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರ ಚಿಕಿತ್ಸೆಗೆ 2.5ರಿಂದ 3 ಲಕ್ಷ ರೂ. ವೆಚ್ಚವಾಗುತ್ತದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಉಚಿತ ಮಾಡಲಾಗಿದೆ ಎಂದು ಡಾ.ಅರುಣ್ ಕುಮಾರ್ ಹಾಗೂ ಮುಖ್ಯ ಶಸ್ತ್ರಚಿಕಿತ್ಸಕ ಡಾ.ಎನ್.ಶ್ರೀನಿವಾಸ್ ತಿಳಿಸಿದರು. ವಿಮ್ಸ್ ಮೂಳೆ ಮತ್ತು ಕೀಲು ವಿಭಾಗದ ಮುಖ್ಯಸ್ಥರಾದ ಡಾ.ಜಿ.ವಿ.ಗುರುದತ್, ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸುಲು, ಡಾ.ಕೃಷ್ಣ ಇತರರಿದ್ದರು.

ಕೈಗೆ ಬಂತು ಜೀವ!
ಬಿಸಿಯೂಟ ಸಹಾಯಕಿಯಾಗಿರುವ ಮುಮ್ತಾಜ್ 2018ರ ಡಿ. 24ರಂದು ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆಗೆ ಶಾಲಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ನಡೆದ ವಾಹನ ಅಪಘಾತದಲ್ಲಿ ಎರಡು ಕೈಗಳು ಮುರಿದಿದ್ದವು. ಹಿರಿಯೂರು, ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆದ ಬಳಿಕ ವಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದರು. ಮುಮ್ತಾಜ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಹಾಗೂ ಉಚಿತವಾಗಿ ನೆರವೇರಿಸಿದ ವೈದ್ಯರನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.