ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಒತ್ತು ಸಿಗಲಿ

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಅನಿಲ್ ಸಹಸ್ರಬುಧೆ ಅಭಿಮತ | ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ

ಬಳ್ಳಾರಿ: ಜೀವನದಲ್ಲಿ ಬೈಪಾಸ್ ರಸ್ತೆಗಳಿಲ್ಲ. ಯಶಸ್ಸು ಸಾಧನೆಗೆ ಅನೈತಿಕ ಮಾರ್ಗ ಅನುಸರಿಸುವುದು ಸರಿಯಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಸಾಮರ್ಥ್ಯವಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಅನಿಲ್ ಸಹಸ್ರಬುಧೆ ಹೇಳಿದರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಏಳನೇ ಘಟಿಕೋತ್ಸವದಲ್ಲಿ ಮಾತನಾಡಿದರು. ಜಗತ್ತಿನ ಇತರ ದೇಶಗಳಿಗಿಂತ ಯುವ ಶಕ್ತಿಯಲ್ಲಿ ಭಾರತ ಮುಂದಿದೆ. ಉನ್ನತ ಶಿಕ್ಷಣದಲ್ಲಿ ಮಹತ್ವದ ಪ್ರಗತಿ ಆಗುತ್ತಿದೆ. ಆದರೆ, ಎಲ್ಲ ಪದವೀಧರರಿಗೆ ಉದ್ಯೋಗ ಸಿಗುವ ಶಿಕ್ಷಣ ನಮ್ಮ ಗುರಿಯಾಗಬೇಕಿದೆ. ವೃತ್ತಿಪರ, ನೈತಿಕ ಮೌಲ್ಯಗಳು, ಕೌಶಲ್ಯಗಳನ್ನು ಬೆಳೆಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಕೈಗಾರಿಕಾ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಅನುಭವ ಪಡೆಯಲು ಅವಕಾಶ ನೀಡಬೇಕು. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾದಂಥ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯಗಳು ಸರ್ಕಾರಿ ಕಚೇರಿಗಳಂತೆ ಕಾಲಮಿತಿ ನಿಗದಿಪಡಿಸದೆ ವಿದ್ಯಾರ್ಥಿಗಳಿಗೆ ದಿನದ 24 ಗಂಟೆ ಸೌಲಭ್ಯಗಳನ್ನು ಕಲ್ಪಿಸುವ ಕೇಂದ್ರವಾಗಬೇಕು. ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಕ್ರಾಂತಿಯಿಂದಾಗಿರುವ ಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಹೊರಗಿನ ಪ್ರಪಂಚ ಮನೆ, ಕಾಲೇಜು ಅಥವಾ ವಿಶ್ವವಿದ್ಯಾಲಯದಂತೆ ಸ್ನೇಹಪರವಾಗಿಲ್ಲ. ಜೀವನದಲ್ಲಿ ಗುರಿ ಇಟ್ಟುಕೊಂಡು ಉತ್ಸಾಹ ಹಾಗೂ ಬದ್ಧತೆಯೊಂದಿಗೆ ಗುರಿ ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಮೌಲ್ಯಮಾಪನ ಕುಲಸಚಿವ ಕೆ.ರಮೇಶ್, ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ ಸದಸ್ಯರು ಹಾಜರಿದ್ದರು.


ಡಾಕ್ಟರೇಟ್ ಪುರಸ್ಕೃತರು ಗೈರು:ಗೌರವ ಡಾಕ್ಟರೇಟ್ ಪುರಸ್ಕೃತ ಬ್ರಹ್ಮ ಕುಮಾರೀಸ್ ಸಂಸ್ಥೆಯ ಹೆಚ್ಚುವರಿ ಮುಖ್ಯಸ್ಥೆ ರಾಜಯೋಗಿನಿ ದಾದಿ ಹೃದಯ ಮೋಹಿನಿ ಘಟಿಕೋತ್ಸವಕ್ಕೆ ಗೈರಾಗಿದ್ದರು. ಅವರ ಪರವಾಗಿ ಓಂ ಶಾಂತಿ ಸಂಸ್ಥೆಯ ಯೋಗ ಕೇಂದ್ರದ ಮುಖ್ಯಸ್ಥ ಮೃತ್ಯುಂಜಯ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದರು. ಅಪರಾಧ, ರೋಗ, ಬಡತನ, ಭಯ, ಪರಿಸರ ಮಾಲಿನ್ಯ ಮುಕ್ತ ಸಮಾಜಕ್ಕಾಗಿ ಶಿಕ್ಷಣ ನೀಡುವ ಅಗತ್ಯವಿದೆ. ಆಧ್ಯಾತ್ಮಿಕತೆಯ ಕೊರತೆಯಿಂದ ಸಮಾಜದಲ್ಲಿ ನ್ಯೂನ್ಯತೆಗಳಿವೆ. ವಿಶ್ವವಿದ್ಯಾಲಯಗಳು ಚಿಂತನೆಯ ಪ್ರಯೋಗಾಲಯಗಳಾಗಬೇಕು ಎಂದು ಹೇಳಿದರು.

ಗೌರವ ಡಾಕ್ಟರೇಟ್ ಪುರಸ್ಕೃತರು:ಕುಲಸಚಿವೆ ಬಿ.ಕೆ.ತುಳಸಿಮಾಲಾ ಗೌರವ ಡಾಕ್ಟರೇಟ್ ಪುರಸ್ಕೃತ ರಾಜಯೋಗಿನಿ ದಾದಿ ಹೃದಯ ಮೋಹಿನಿಯವರ ಪರಿಚಯ ನೀಡಿದರು. 1937ರಲ್ಲಿ ಒಂಬತ್ತನೇ ವಯಸ್ಸಿನಲ್ಲೇ ಬ್ರಹ್ಮಕುಮಾರೀಸ್ ಸಂಘಟನೆಯ ಸಂಪರ್ಕಕ್ಕೆ ಬಂದ ದಾದಿ ಹೃದಯ ಮೋಹಿನಿ 1950ರಲ್ಲಿ ಮೌಂಟ್ ಅಬು ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರ ಸ್ಥಾನಕ್ಕೆ ಸೇರ್ಪಡೆಯಾದರು. ದೇಶ ವಿದೇಶಗಳಿಗೆ ಭೇಟಿ ನೀಡಿ ಧ್ಯಾನದ ಬೋಧನೆ ಹಾಗೂ ಬೋಧನಾ ಕೇಂದ್ರಗಳನ್ನು ಆರಂಭಿಸುವಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕ, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳು ಸರ್ಕಾರದ ಅತಿಥಿ ಎಂದು ಪರಿಗಣಿಸಿ ಗೌರವಿಸಿವೆ. ಜಗತ್ತಿನ 112 ದೇಶಗಳಿಗೆ ಭೇಟಿ ನೀಡಿ ಆಧ್ಯಾತ್ಮದ ಚಿಂತನೆ ಪ್ರಸಾರ ಮಾಡಿದ್ದಾರೆ ಎಂದು ಕುಲಸಚಿವೆ ಬಿ.ಕೆ.ತುಳಸಿಮಾಲಾ ತಿಳಿಸಿದರು.

ಗಣ್ಯರು ಬರಲಿಲ್ಲ: ಘಟಿಕೋತ್ಸವ ಅಧ್ಯಕ್ಷತೆ ವಹಿಸಬೇಕಿದ್ದ ರಾಜ್ಯಪಾಲ ವಜುಭಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಘಟಿಕೋತ್ಸವಕ್ಕೆ ಗೈರಾಗಿದ್ದರು. ಇದರಿಂದಾಗಿ ಕುಲಪತಿ ಎಂ.ಎಸ್.ಸುಭಾಷ್ ಕುಲಾಧಿಪತಿಯ, ಕುಲಸಚಿವೆ ಬಿ.ಕೆ.ತುಳಸಿಮಾಲಾ ಕುಲಪತಿಯ ಹಾಗೂ ಮೌಲ್ಯಮಾಪನ ಕುಲಸಚಿವ ಕೆ.ರಮೇಶ್ ಕುಲಸಚಿವರ ಜವಾಬ್ದಾರಿ ನಿರ್ವಹಿಸಿದರು. ರಾಜ್ಯಪಾಲ ವಜುಭಾಯಿ ವಾಲಾ ಗುಜರಾತ್‌ಗೆ ತೆರಳಿದ್ದಾರೆ. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಚುನಾವಣಾ ನೀತಿ ಸಂಹಿತಿಯಿಂದಾಗಿ ಘಟಿಕೋತ್ಸವಕ್ಕೆ ಬಂದಿಲ್ಲ ಎಂದು ಕುಲಪತಿ ಎಂ.ಎಸ್.ಸುಭಾಷ್ ತಿಳಿಸಿದರು.

ರಾಜ್ಯದ ವಿಶ್ವವಿದ್ಯಾಲಯಗಳ 5ರಿಂದ 10 ವರ್ಷಗಳ ವರ್ಗದ ರ‌್ಯಾಂಕಿಂಗ್ ಫ್ರೇಮ್ ವರ್ಕಿನಲ್ಲಿ ವಿಎಸ್‌ಕೆ ವಿವಿ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉನ್ನತ ಶಿಕ್ಷಣ ನೀಡುವಲ್ಲಿ ವಿಶ್ವವಿದ್ಯಾಲಯ ವೇಗವಾಗಿ ಹೆಜ್ಜೆ ಇಡುತ್ತಿದೆ. ಶೇ.25 ಪ್ರವೇಶ ಅನುಪಾತ ಹೆಚ್ಚಿಸಲು 300 ಪದವಿ ಕಾಲೇಜುಗಳ ಅಗತ್ಯವಿದೆ. ಪ್ರಸ್ತುತ ಶೇ.20 ಪ್ರಗತಿ ಸಾಧಿಸಿದ್ದು, 2025ರ ಹೊತ್ತಿಗೆ ಗುರಿ ತಲುಪುವ ನಿರೀಕ್ಷೆ ಇದೆ. ಎಲ್ಲ ವಲಯಗಳಿಂದ ಮುಕ್ತವಾಗಿ ದೋಷಾರೋಪಣಾ ಅರ್ಜಿಗಳನ್ನು ಸ್ವೀಕರಿಸಿ ಸೂಕ್ತವಾಗಿ ಉತ್ತರ ನೀಡುವ ಮೂಲಕ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆಸಲಾಗಿದೆ.
| ಎಂ.ಎಸ್.ಸುಭಾಷ್ ವಿಎಸ್‌ಕೆ ವಿವಿ ಕುಲಪತಿ ಬಳ್ಳಾರಿ

Leave a Reply

Your email address will not be published. Required fields are marked *