ಇಬ್ಬರು ಕಳ್ಳರ ಬಂಧನ

<ನಗದು ಸೇರಿ 31 ಲಕ್ಷ ರೂ.ಮೌಲ್ಯದ ವಸ್ತುಗಳು ಜಪ್ತಿ>

ಬಳ್ಳಾರಿ: ಇಲ್ಲಿನ ಗಾಂಧಿನಗರದ ಮೂರನೇ ಕ್ರಾಸ್‌ನಲ್ಲಿ 2018ರ ಡಿ.12ರಂದು ಮಹಾವೀರ್ ಎಂಬುವವರ ನಿವಾಸದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನ ರಾಯಪಾಟಿ ವೆಂಕಯ್ಯ ಹಾಗೂ ನರಸರಾವಪೇಟ ನಗರದ ಜಂಗಂ ಚಂಟಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 900 ಗ್ರಾಂ ಚಿನ್ನದ ಆಭರಣ, ಎರಡು ಕಿಲೋ ಬೆಳ್ಳಿ ವಸ್ತುಗಳು, ನಾಲ್ಕು ಕಿಲೋ ಬೆಳ್ಳಿ ಗಟ್ಟಿ, 4.63 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 32 ಸಾವಿರ ರೂ. ಬೆಲೆಯ ಕ್ಯಾಮರಾ, 10 ಸಾವಿರ ರೂ. ಮೌಲ್ಯದ ಕ್ಯಾಮರಾ ಲೆನ್ಸ್, 6500 ರೂ. ಮೌಲ್ಯದ ಕೂಲಿಂಗ್ ಗ್ಲಾಸ್, 500 ರೂ. ಮೌಲ್ಯದ ಲ್ಯಾಪ್‌ಟಾಪ್ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಒಟ್ಟು 31 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಂಧಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.