ತುಂಗಭದ್ರಾ ಅಣೆಕಟ್ಟೆ ನಾಡಿನ ಸಂಪತ್ತು

ಸಂಗನಬಸವ ಸ್ವಾಮೀಜಿ ಅಭಿಮತ ಅಮೃತ ಮಹೋತ್ಸವ ಕಾರ್ಯಕ್ರಮ

ಬಳ್ಳಾರಿ: ತುಂಗಭದ್ರಾ ಅಣೆಕಟ್ಟೆ ನಾಡಿನ ಸಂಪತ್ತು. ಅಣೆಕಟ್ಟೆ ರಕ್ಷಣೆಗೆ ಪಕ್ಷಾತೀತ ಬೆಂಬಲ ಅಗತ್ಯವಾಗಿದೆ. ಹೂಳು ತೆಗೆಯುವುದು, ಸಮನಾಂತರ ಜಲಾಶಯ, ನದಿಗಳ ಜೋಡಣೆ ಒಟ್ಟಾರೆ ಯಾವುದೋ ಒಂದು ಮಾರ್ಗದಿಂದ ಅಣೆಕಟ್ಟೆಯಲ್ಲಿ 133 ಟಿಎಂಸಿ ಅಡಿ ನೀರು ಸಂಗ್ರಹವಾಗಬೇಕು ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಜಗದ್ಗುರು ಸಂಗನಬಸವ ಸ್ವಾಮೀಜಿ ಹೇಳಿದರು.

ನಗರದ ಬಿಡಿಎ ಸಭಾಂಗಣದಲ್ಲಿ ಗುರುವಾರ ತುಂಗಭದ್ರಾ ರೈತಸಂಘದಿಂದ ಆಯೋಜಿಸಿದ್ದ ತುಂಗಭದ್ರಾ ಜಲಾಶಯದ ಅಮೃತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ತುಂಗಭದ್ರಾ ಅಣೆಕಟ್ಟೆ ನಿರ್ಮಿಸಿದ 75 ವರ್ಷಗಳಲ್ಲಿ ಲಕ್ಷಾಂತರ ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಆದರೆ, ತುಂಗಭದ್ರಾ ಮಂಡಳಿ ಆಂಧ್ರ ಪರ ಪಕ್ಷಪಾತಿಯಾಗಿದೆ ಎಂದು ಆರೋಪಿಸಿದರು.

ತುಂಗಭದ್ರಾ ಮಂಡಳಿಯಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವವರ ಅಗತ್ಯ ಇದೆ. ಕಾವೇರಿ ಮಾದರಿಯಲ್ಲಿ ತುಂಗಭದ್ರಾ ಅಣೆಕಟ್ಟೆ ಸಂರಕ್ಷಣೆಗಾಗಿ ಹೋರಾಟ ನಡೆಸುವ ಅಗತ್ಯತೆ ಇದೆ. ಅಣೆಕಟ್ಟೆಯಲ್ಲಿ ರೈತರು ಹೂಳು ತೆಗೆಯಲು ಆರಂಭಿಸಿದ ಪರಿಣಾಮ ಉತ್ತರ ಕರ್ನಾಟಕದ ಅನೇಕ ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸ ಆರಂಭವಾಯಿತು. ನೀರಿನ ಸಂರಕ್ಷಣೆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ಕಳಕಳಿ ಸರ್ಕಾರಕ್ಕೆ ಇರಬೇಕು.

ಗಣಿಗಾರಿಕೆ ಇತ್ಯಾದಿ ಕಾರಣಕ್ಕೆ ಪಶ್ಚಿಮ ಘಟ್ಟದ ಅರಣ್ಯ ನಾಶಕ್ಕೆ ಸರ್ಕಾರಗಳೇ ಕಾರಣವಾಗಿವೆ. ಪಶ್ಚಿಮ ಘಟ್ಟದ ಕಾಡುಗಳು ಚೆನ್ನಾಗಿದ್ದರೆ ಸಮರ್ಪಕ ಮಳೆಯಾಗುತ್ತಿತ್ತು. ಜಿಲ್ಲೆಯ ಅರಣ್ಯ ಪ್ರದೇಶದ ಬೆಟ್ಟಗಳನ್ನು ದತ್ತು ನೀಡಿದರೆ ನಾನು ಮರಗಳನ್ನು ಬೆಳೆಸುತ್ತೇನೆ ಎಂದು ಸಂಗನಬಸವ ಸ್ವಾಮೀಜಿ ಹೇಳಿದರು.

ಪ್ರಾಧ್ಯಾಪಕ ಎಚ್.ಮಹಾಬಲೇಶ್ವರ ತುಂಗಭದ್ರಾ ಅಣೆಕಟ್ಟೆಯ ಇತಿಹಾಸ ತಿಳಿಸಿದರು. ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ತುಂಗಭದ್ರಾ ಅಣೆಕಟ್ಟೆಯಲ್ಲಿ ಸಂಗ್ರಹವಾಗುತ್ತಿರುವ ಹೂಳಿನಿಂದ ರೈತ ಸಮುದಾಯಕ್ಕೆ ಎದುರಾಗಲಿರುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ತುಂಗಭದ್ರಾ ನೀರಾವರಿ ವಲಯದ ನಿವೃತ್ತ ಇಂಜಿನಿಯರ್‌ಗಳಾದ ವಿ.ಪಿ.ಉದ್ದಿಹಾಳ, ಕೆ.ಗೋವಿಂದುಲು, ವೀರೇಶಯ್ಯ, ಚನ್ನಬಸಪ್ಪ, ರಾಮರಾವ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ವಿ.ರಾಮಪ್ರಸಾತ್ ಮನೋಹರ್ ಮಾತನಾಡಿ, ತುಂಗಭದ್ರಾ ಅಣೆಕಟ್ಟೆ ಅಮೃತ ಮಹೋತ್ಸವ ಕಾರ್ಯಕ್ರಮ ನಾಲ್ಕು ಗೋಡೆಗಳ ನಡುವೆ ನಡೆಯುವ ಬದಲಿಗೆ ನಾಡಹಬ್ಬದ ರೀತಿಯಲ್ಲಿ ನಡೆಯಬೇಕು. ಹೂಳು ತೆಗೆಯುವ ಹೋರಾಟಕ್ಕೆ ಪುರುಷೋತ್ತಮ ಗೌಡ ಶಕ್ತಿ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರ ತುಂಬಾ ಮಹತ್ವ ಪಡೆಯಲಿದೆ. ನಾನು ನಮ್ಮಜ್ಜನಿಂದ ಬಳುವಳಿಯಾಗಿ ಬಂದ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಿದ್ದೇನೆ. ಇದರಿಂದಾಗಿ ರೈತರೊಂದಿಗೆ ನನಗೆ ಭಾವನಾತ್ಮಕ ಸಂಬಂಧ ಇದೆ. ತುಂಗಭದ್ರಾ ಜಲಾಶಯದ ಸಂರಕ್ಷಣೆಗೆ ಜಿಲ್ಲಾಡಳಿತ ಕಾಳಜಿ ತೋರಲಿದೆ ಎಂದು ಹೇಳಿದರು.

ತುಂಗಭದ್ರಾ ಅಣೆಕಟ್ಟೆ ಎರಡು ಕೋಟಿ ಜನರ ಜೀವನಾಡಿಯಾಗಿದೆ. ಸಾಕಷ್ಟು ವಿರೋಧದ ನಡುವೆ ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ ಹೂಳು ತೆಗೆಯುವ ಕೆಲಸಕ್ಕೆ ಚಾಲನೆ ನೀಡಿದರು. ಅಣೆಕಟ್ಟೆ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಂಘರ್ಷ ಏರ್ಪಡುವ ಸಾಧ್ಯತೆಗಳಿವೆ.
| ಮಹೇಶ್ವರ ಸ್ವಾಮೀಜಿ ನಂದಿಪುರ

Leave a Reply

Your email address will not be published. Required fields are marked *