ಗಿರೀಶ್ ಕಾರ್ನಾಡ್‌ರ ತುಘಲಕ್ ನಾಟಕ ಓದು ಕಾರ್ಯಕ್ರಮ ಜು.20ರಂದು

ರಂಗತೋರಣ ಸಂಸ್ಥೆ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿಕೆ

ಬಳ್ಳಾರಿ: ನಗರದ ರಂಗತೋರಣ ಸಂಸ್ಥೆ ರಂಗಸಾಲಿ ಓದು ನಾಟ್ಕ ಓದು ಎಂಬ ಕಾರ್ಯಕ್ರಮ ಆರಂಭಿಸುತ್ತಿದೆ. ಜು.20ರಂದು ನಗರದ ಬಿಪಿಎಸ್‌ಸಿ ಶಾಲೆಯಲ್ಲಿ ಮೊದಲ ಕಾರ್ಯಕ್ರಮ ಏರ್ಪಡಿಸಿದ್ದು, ಸಾಹಿತಿ ಗಿರೀಶ್ ಕಾರ್ನಾಡ್‌ರ ತುಘಲಕ್ ನಾಟಕದ ವಾಚನ ನಡೆಯಲಿದೆ.

ಪ್ರಮುಖ ನಾಟಕಕಾರರ ಆಯ್ದ ಒಂದು ಕೃತಿಯನ್ನು ಓದುವುದು, ಪಾತ್ರಗಳ ಬಗ್ಗೆ, ಅವುಗಳ ಪ್ರಭಾವದ ಕುರಿತು ಆಲೋಚನೆಗಳನ್ನು ಹಂಚಿಕೊಳ್ಳುವುದು ಕಾರ್ಯಕ್ರಮ ಆಯೋಜನೆಯ ಉದ್ದೇಶವಾಗಿದೆ. ನಾಟಕದ ಓದಿನಿಂದ ಯುವ ಪೀಳಿಗೆಯಲ್ಲಿ ಓದಿನ ಬಗ್ಗೆ ಆಸಕ್ತಿ ಹುಟ್ಟಿಸುವುದು, ಭಾಷೆಯ ಶುದ್ಧೀಕರಣ, ಸಂಭಾಷಣೆಯ ವೈವಿಧ್ಯತೆ ಅರಿಯುವುದರ ಜತೆಗೆ ಉತ್ತಮ ನಾಟಕಕಾರರ ಕೃತಿಗಳನ್ನು ಪರಿಚಯಿಸಲು ರಂಗಸಾಲಿ ಕಾರ್ಯಕ್ರಮ ವೇದಿಕೆಯಾಗಲಿದೆ ಎಂದು ರಂಗತೋರಣ ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ತಿಂಗಳ ಎರಡನೇ ಶನಿವಾರ ನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಬಿಪಿಎಸ್‌ಸಿ ಶಾಲೆಯ ಆವರಣದಲ್ಲಿ ರಂಗಸಾಲಿ ಓದು ನಾಟ್ಕ ಓದು ಕಾರ್ಯಕ್ರಮ ಆಯೋಜಿಸಲಾಗುವುದು. ಜು.20ರಂದು ಸಂಜೆ 5.30ರಿಂದ 7.30ರವರೆಗೆ ನೀನಾಸಂ ಪದವೀಧರ, ಥೇಟರ್ ಸಮುರಾಯ್‌ನ ನಟ, ನಿರ್ದೇಶಕ ಅವಿನಾಶ ರೈ ಕಾಸರಗೋಡು, ಗಿರೀಶ್ ಕಾರ್ನಾಡ್‌ರ ತುಘಲಕ್ ನಾಟಕ ವಾಚನ ಮಾಡಲಿದ್ದಾರೆ ಎಂದು ಪ್ರಭುದೇವ ಕಪ್ಪಗಲ್ಲು ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಯೋಜಕ ಗಂಗಾಧರ್ ದುರ್ಗಮ್, ಅಡವಿಸ್ವಾಮಿ, ಕೆ.ಆರ್.ಮಲ್ಲೇಶ್ ಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *