ವಿದ್ಯಾರ್ಥಿಗಳು ಕಾದಂಬರಿ ಸಾಹಿತ್ಯವನ್ನು ಆಸ್ವಾದಿಸಬೇಕು – ಕನ್ನಡ ವಿವಿ ಕುಲಪತಿ ಸ.ಚಿ.ರಮೇಶ್ ಸಲಹೆ

ಡಾ.ನಾಗೇಶ್ ಹೆಬ್ಬಾಲೆಯವರ ಅಗ್ರಹಾರ ಕಾದಂಬರಿ ಬಿಡುಗಡೆ

ಬಳ್ಳಾರಿ: ಕಾದಂಬರಿಗಳು ಅನೇಕ ವಿಷಯ ವಸ್ತುಗಳನ್ನು ಒಳಗೊಂಡು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತವೆ. ಸಮಾಜದಲ್ಲಿ ಅನೇಕ ಬಗೆಯ ತೊಳಲಾಟಗಳು ಇದ್ದು, ಕಾದಂಬರಿಕಾರರು ಅವುಗಳನ್ನು ಓದುಗರ ಕಣ್ಣಿಗೆ ಕಟ್ಟುವಂತೆ ಬರೆಯುವ ಸೃಜನಶೀಲತೆ ಹೊಂದಿರುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಕಾದಂಬರಿ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ್ ಹೇಳಿದರು.

ನಗರದ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಕಸಾಪ ಜಿಲ್ಲಾ ಘಟಕ ಹಾಗೂ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಗಿದ್ದ ಕೆ.ನಾಗೇಶ್ ಅವರ ಅಗ್ರಹಾರ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಗ್ರಹಾರ ಕೃತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಜ್ಯೋತಿಬಾಪುಲೆ ಸೇರಿದಂತೆ ಅನೇಕ ಸಮಾಜ ಸುಧಾರಕರ ತತ್ವ ಚಿಂತನೆಗಳು ಅಡಗಿವೆ. ಕೊಡಗು ಪ್ರದೇಶದ ಭಾಷೆ ಮತ್ತು ಸಾಂಸ್ಕೃತಿಕ ಸೊಗಡನ್ನು ಕಾದಂಬರಿಯಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಮಾತನಾಡಿ, ಅಗ್ರಹಾರ ಕಾದಂಬರಿ ಜಾನಪದ ಹಿನ್ನೆಲೆಯನ್ನು ಹೊಂದಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ದೇಶದ ಗ್ರಾಮೀಣ ಜನರ ಬದುಕು ಸುಧಾರಿಸಿಲ್ಲ. ಜಾತೀಯತೆ ತಾಂಡವವಾಡುತ್ತಿದೆ. ಕೃತಿಯಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ ಎಂದು ಹೇಳಿದರು. ಸರಳಾದೇವಿ ಕಾಲೇಜಿನ ಪ್ರಾಚಾರ್ಯ ಯು.ಅಬ್ದುಲ್ ಮುತಾಲಿಬ್ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸದಿಂದ ಲೇಖಕರು ಹಾಗೂ ಸಂಸ್ಕೃತಿಯ ಚಿಂತಕರಾಗಬಹುದು ತಿಳಿಸಿದರು.

ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿದರು. ಕತೆಗಾರ ಡಾ.ಸಂಪಿಗೆ ನಾಗರಾಜ ಉಪಸ್ಥಿತರಿದ್ದರು. ಗಾಯಕ ಎಸ್.ಎಂ.ಹಿರೇಮಠ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಸಿ.ದೇವಣ್ಣ ಸ್ವಾಗತಿಸಿದರು. ದಿವಾಕರನಾರಾಯಣ ನಿರೂಪಿಸಿದರು.