ನಿರ್ದಿಷ್ಟ ಗುರಿ ಸಾಧನೆಗೆ ಕಾಯದೇ, ಕಾರ್ಯಪ್ರವೃತ್ತರಾಗಿ – ಅದಮ್ಯ ಚೇತನದ ನಿರ್ದೇಶಕಿ ತೇಜಸ್ವಿನಿ ಅನಂತ ಕುಮಾರ ಸಲಹೆ

ರಾಜ್ಯಮಟ್ಟದ ಮಹಿಳಾ ವೈದ್ಯರ ಸಮ್ಮೇಳನ

ಬಳ್ಳಾರಿ: ಸಾಧನೆಗೆ ಕಾಯಬಾರದು. ನಿರ್ದಿಷ್ಟ ಗುರಿ ಸಾಧನೆಗೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಅದಮ್ಯ ಚೇತನದ ನಿರ್ದೇಶಕಿ ತೇಜಸ್ವಿನಿ ಅನಂತ ಕುಮಾರ್ ಸಲಹೆ ನೀಡಿದರು.

ನಗರದ ಹೊರವಲಯದ ಅಲ್ಲಂ ಭವನದಲ್ಲಿ ಭಾನುವಾರ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ, ಮಹಿಳಾ ವೈದ್ಯರ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಹಿಳಾ ವೈದ್ಯರ ಸಮ್ಮೇಳನ ಅದ್ವಿತಿ-2019ಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಧನೆಗೆ ಅಡ್ಡಿಯಾಗುವ ಕಷ್ಟಗಳಿಗೆ ಹೆದರದೆ, ಅದಮ್ಯ ಉತ್ಸಾಹ ಬೆಳೆಸಿಕೊಳ್ಳಬೇಕು. ಅದರಲ್ಲೂ ವೈದ್ಯ ವೃತ್ತಿಯಲ್ಲಿ ನಿತ್ಯ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಅವುಗಳನ್ನ ಚಾಕಚಕ್ಯತೆಯಿಂದ ನಿರ್ವಹಿಸುವ ಕೌಶಲ ರೂಢಿಸಿಕೊಳ್ಳಬೇಕು. ವೈದ್ಯರೂ ಮನುಷ್ಯರೇ, ಚಿಕಿತ್ಸೆ ಫಲಿಸದೆ ರೋಗಿ ಮೃತಪಟ್ಟಾಗ ಅವರ ಮನಸಿಗೂ ನೋವು, ಹತಾಶೆ ಕಾಡುತ್ತದೆ. ಕುಟುಂಬ ನಿರ್ವಹಣೆ ಜತೆಗೆ ವೃತ್ತಿ ನಿರ್ವಹಿಸುವ ಮಹಿಳಾ ವೈದ್ಯರ ಸಾಧನೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಪ್ರತಿ ಭಾನುವಾರ ಸಸಿ ನೆಡಲಾಗುತ್ತಿದೆ. ಹೀಗಾಗಿ ಬೆಂಗಳೂರು ಬಿಟ್ಟು ಹೊರಹೋಗಲು ಮನಸ್ಸಾಗುವುದಿಲ್ಲ. ಸಸಿ ನೆಡುವ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ. ಬಳ್ಳಾರಿ ದೇಶದ ಗಮನಸೆಳೆದಿದೆ. ಶಿಲಾಯುಗಕ್ಕೆ ಸಂಗನಕಲ್ಲು, ಬೂದಿಗುಡ್ಡ ನಿದರ್ಶನವಾಗಿವೆ. ಇಲ್ಲಿಗೆ ಬಂದಾಗ ಕೋಟೆಗೂ ಹೋಗುತ್ತಿದ್ದೆ ಎಂದು ತಮ್ಮ ಹಳೆ ನೆನಪು ಸ್ಮರಿಸಿಕೊಂಡರು.

ಹೃದ್ರೋಗ ತಜ್ಞೆ ವಿಜಯಲಕ್ಷ್ಮಿ, ಉನ್ನತಿ ಫೌಂಡೇಶನ್‌ನ ಅಧ್ಯಕ್ಷೆ ಡಾ.ಸರಸ್ವತಿ ಹೆಗಡೆ ಮಾತನಾಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎನ್.ಶ್ರೀನಿವಾಸ್, ಕಾರ್ಯದರ್ಶಿ ಗೋವರ್ಧನ್‌ರೆಡ್ಡಿ, ಡಾ.ಮದುಸೂದನ್ ಕಾರಿಗನೂರು, ಡಾ.ಅರುಣಾ ಕಾಮಿನೇನಿ, ವೆಂಕಟರಾವ್ ಚಲಪತಿ, ಡಾ.ನಾಜ್ ಜಹಾನ್ ಶೇಖ್, ಡಾ.ಗಂಗಮ್ಮ, ಡಾ.ಜಯಶ್ರೀ, ಡಾ.ಯೋಗಾನಂದರೆಡ್ಡಿ ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಮಹಿಳಾ ವೈದ್ಯರು ಆಗಮಿಸಿದ್ದರು.

Leave a Reply

Your email address will not be published. Required fields are marked *