ಮೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ: ಶ್ರೀರಾಮುಲು

ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಮೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧೆ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ವಿಶ್ವಾಸದಿಂದ ಮಂಡ್ಯ, ಶಿವಮೊಗ್ಗ, ಬಳ್ಳಾರಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಗೆಲುವು ಖಚಿತ ಎಂದು ಮೊಳಕಲ್ಮೂರು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.

ಅಲ್ಪಾವಧಿಯಲ್ಲಿ ಚುನಾವಣೆ ಘೋಷಣೆಯಾಗಿದೆ. ಆಕಾಂಕ್ಷಿಗಳ ಹೆಸರು ಬಹಿರಂಗಪಡಿಸುವುದಿಲ್ಲ. 7 ರಿಂದ 8 ಜನ ಆಕಾಂಕ್ಷಿಗಳಿದ್ದಾರೆ. ಸ್ಥಳೀಯರು, ಬೇರೆ ಜಿಲ್ಲೆಯವರು, ರಾಜ್ಯ ನಾಯಕರು ಪಟ್ಟಿಯಲ್ಲಿದ್ದಾರೆ. ಆಕಾಂಕ್ಷಿಗಳ ಪಟ್ಟಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಕಳಿಸಲಾಗುವುದು. ಅವರು ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತಾರೆ. ಪಕ್ಷದ ತೀರ್ಮಾನದ ಪ್ರಕಾರ ಅಭ್ಯರ್ಥಿಯ ಗೆಲ್ಲಿಸಲು ಶ್ರಮಿಸುತ್ತೇನೆ. ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದ್ದರೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ನನ್ನಿಂದ ಬಳ್ಳಾರಿಯಲ್ಲಿ ಮೂರು ಉಪಚುನಾವಣೆ ನಡೆದಿರುವುದು ನಿಜ. ನಾನೊಬ್ಬನೇ ಅಲ್ಲ, ಹಲವು ಹಿರಿಯ ನಾಯಕರಿಗೂ ಇಂತಹ ಇತಿಹಾಸವಿದೆ. ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ನಮ್ಮ ಪಕ್ಷದ ಶಾಸಕರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಗಾಳ ಹಾಕುತ್ತಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ರಾಜ್ಯ ಸರ್ಕಾರ ಪತನವಾಗಿರುತ್ತದೆ ಎಂದು ಶ್ರೀರಾಮುಲು ಭವಿಷ್ಯ ನುಡಿದರು.