ವಿಶ್ವಾಸ ಮತ ಯಾಚನೆ ವೇಳೆ ಸದನಕ್ಕೆ ಬರಲು ಸಾಧ್ಯವಿಲ್ಲ ಎಂದು ಶಾಸಕ ನಾಗೇಂದ್ರ

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಸದನದಲ್ಲಿ ವಿಶ್ವಾಸ ಸಾಬೀತು ಪಡಿಸಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಸಕಲ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ವಿಶ್ವಾಸ ಮತ ಯಾಚನೆ ವೇಳೆ ಸದನಕ್ಕೆ ಆಗಮಿಸಲು ಸಾಧ್ಯವಿಲ್ಲ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ತಿಳಿಸಿದ್ದಾರೆ.

ಎದೆನೋವಿನಿಂದ ಬಳಲುತ್ತಿರುವ ನಾಗೇಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಿಎಂ ಮತ್ತು ಸಚಿವ ಡಿ.ಕೆ. ಶಿವಕುಮಾರ್​ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ನಾಗೇಂದ್ರ ಅವರ ಆರೋಗ್ಯ ವಿಚಾರಿಸಿದ್ದರು. ಕೈ ನಾಯಕರು ವಿಶ್ವಾಸ ಮತ ಯಾಚನೆ ವೇಳೆ ಸದನಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡಿದ್ದರು.

ಆದರೆ ಶುಕ್ರವಾರ ಆಪರೇಷನ್​ ಇರುವುದರಿಂದ ವಿಶ್ವಾಸ ಮತ ಯಾಚನೆ ವೇಳೆ ಸದನಕ್ಕೆ ಆಗಮಿಸಲು ಸಾಧ್ಯವಿಲ್ಲ ಎಂದು ನಾಗೇಂದ್ರ ತಿಳಿಸಿದ್ದಾರೆ. ಜತೆಗೆ ಮುಂಬೈನಲ್ಲಿರುವ ಅತೃಪ್ತ ಶಾಸಕರ ಭವಿಷ್ಯ ಇಂದು ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಆಧಾರದಲ್ಲಿ ನಿರ್ಧಾರವಾಗಲಿದೆ. ಶಾಸಕ ರಾಮಲಿಂಗಾರೆಡ್ಡಿ ಅವರೂ ಸಹ ಸದನಕ್ಕೆ ಹಾಜರಾಗುವ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

ಐಎಂಎ ಹಗರಣದಲ್ಲಿ ಎಸ್​ಐಟಿ ತನಿಖೆ ಎದುರಿಸುತ್ತಿರುವ ಶಾಸಕ ರೋಷನ್​ ಬೇಗ್​ ಸಹ ಕಾಂಗ್ರೆಸ್​ ವಿಪ್​ಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ನಾಯಕರಿಗೆ ವಿಶ್ವಾಸಮತ ಯಾಚನೆಗೂ ಮೊದಲೇ ಬಿಗ್​ ಶಾಕ್​ ಎದುರಾಗಿದೆ.

Leave a Reply

Your email address will not be published. Required fields are marked *