1122 ಕೋಟಿ ರೂ. ತಲುಪಿದ ವಹಿವಾಟು – ಸುದ್ದಿಗೋಷ್ಠಿಯಲ್ಲಿ ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಮಾಹಿತಿ

ಬಳ್ಳಾರಿ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸುಕೋ ಬ್ಯಾಂಕ್ 2018-19ನೇ ಸಾಲಿನಲ್ಲಿ 1122 ಕೋಟಿ ರೂ. ವಹಿವಾಟು ನಡೆಸಿ ಶೇ.40 ಪ್ರಗತಿ ಸಾಧಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ತಿಳಿಸಿದರು.

ನಗರದ ಮೋಕಾ ರಸ್ತೆಯಲ್ಲಿರುವ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಆರ್ಥಿಕ ಸಾಲಿನಲ್ಲಿ ಬ್ಯಾಂಕಿನ ವಹಿವಾಟನ್ನು ಒಂದು ಸಾವಿರ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿತ್ತು. ನಮ್ಮ ನಿರೀಕ್ಷೆ ಮೀರಿ ವಹಿವಾಟು 1122 ಕೋಟಿ ತಲುಪಿದೆ. ಸಹಕಾರ ಕ್ಷೇತ್ರದಲ್ಲಿ ಸುಕೋ ಬ್ಯಾಂಕ್ ಭದ್ರವಾಗಿ ತಳವೂರಿದ್ದು ಪ್ರತಿ ವರ್ಷ ಒಟ್ಟಾರೆ ವ್ಯವಹಾರ ವೃದ್ಧಿಸಿಕೊಳ್ಳುತ್ತಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಬ್ಯಾಂಕ್ 9 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು ತೆರಿಗೆ ಪಾವತಿ ಬಳಿಕ ಬ್ಯಾಂಕಿನ ಲಾಭ 4.93 ಕೋಟಿ ರೂ. ಆಗಿದೆ ಎಂದು ಹೇಳಿದರು.

ಸುಕೋ ಬ್ಯಾಂಕ್ ರಾಜ್ಯದ 16 ಜಿಲ್ಲೆಗಳಲ್ಲಿ 28 ಶಾಖೆಗಳನ್ನು ಹೊಂದಿದೆ. ಆರ್‌ಬಿಐ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಿಗೆ ಹೊಸ ಶಾಖೆ ಆರಂಭಿಸಲು ಅನುಮತಿ ನೀಡಿಲ್ಲ. ಇದರಿಂದಾಗಿ ಸದ್ಯಕ್ಕೆ ಬ್ಯಾಂಕಿನ ಶಾಖೆಗಳ ವಿಸ್ತರಣೆ ಇಲ್ಲ. ಸುಕೋ ಬ್ಯಾಂಕ್ 669 ಕೋಟಿ ರೂ. ಠೇವಣಿ ಹೊಂದಿದ್ದು 453 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಬ್ಯಾಂಕಿನ ಅನುತ್ಪಾದಕ ಆಸ್ತಿ ಶೇ 1.97 ಆಗಿದೆ. ಈ ವಿಚಾರ ಬ್ಯಾಂಕಿನ ಆರ್ಥಿಕ ಭದ್ರತೆಯನ್ನು ಸೂಚಿಸುತ್ತದೆ.

ಸುಕೋ ಬ್ಯಾಂಕ್ ರುಪೇ ಪ್ಲಾಟಿನಂ ಕಾರ್ಡ್ ವಿತರಿಸುತ್ತಿರುವ ರಾಜ್ಯದ ಪ್ರಥಮ ಸಹಕಾರ ಬ್ಯಾಂಕ್ ಆಗಿದೆ. ಈಗಾಗಲೇ 25 ಸಾವಿರ ರುಪೇ ಪ್ಲಾಟಿನಂ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಬ್ಯಾಂಕಿನ ಯಾವುದೇ ಗ್ರಾಹಕರು ರುಪೇ ಪ್ಲಾಟಿನಂ ಕಾರ್ಡ್ ಪಡೆದುಕೊಳ್ಳಬಹುದು. ರುಪೇ ಪ್ಲಾಟಿನಂ ಕಾರ್ಡ್ ಮೂಲಕ ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ವಿವಿಧ ರಿಯಾಯತಿಗಳು, ಆಕರ್ಷಕ ಕೊಡುಗೆಗಳು, ಕ್ಯಾಶ್‌ಬ್ಯಾಕ್ ಸೌಲಭ್ಯ ಇದೆ. ಯುಪಿಐ ನೋಂದಣಿಯಾಗಿರುವ ಮೊದಲ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಗೆ ಕೂಡ ಸುಕೋ ಬ್ಯಾಂಕಿನದ್ದಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನೀರಾ ಉತ್ಪಾದನೆಗೆ ಸಿದ್ಧತೆ ನಡೆದಿದೆ ಎಂದು ಮೋಹಿತ್ ಮಸ್ಕಿ ತಿಳಿಸಿದರು. ಬ್ಯಾಂಕಿನ ಸಿಇಒ ಪರಿಮಳಾಚಾರ್ಯ ಅಗ್ನಿಹೋತ್ರಿ, ಕಾರ್ಯದರ್ಶಿ ವೆಂಕಟೇಶ್ವರ ರಾವ್ ಹಾಜರಿದ್ದರು.

ಬ್ಯಾಂಕಿನ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ಸುಕೋ ಸೋಲಾರ್ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಸೋಲಾರ್ ತಂತ್ರಜ್ಞಾನ ಬಳಸಿ ವಿದ್ಯುತ್ ಉತ್ಪಾದಿಸುವ ಈ ಯೋಜನೆಗೆ 300ಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿ ವಿದ್ಯುತ್ ಉತ್ಪಾದನೆಗೆ ಆಸಕ್ತಿ ತೋರಿದ್ದಾರೆ. ಮಾಸಿಕ ಪ್ರತಿ ಕಿಲೋ ವ್ಯಾಟ್‌ಗೆ 872 ರೂ. ಕಂತಿನ ಪ್ರಕಾರ ಸೋಲಾರ್ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದು.
|ಮೋಹಿತ್ ಮಸ್ಕಿ ಸುಕೋ ಬ್ಯಾಂಕ್ ಅಧ್ಯಕ್ಷ