ಬಳ್ಳಾರಿ: ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚಿನ ಜನರು ಗ್ಲಾಕೋಮಾದಿಂದ ಬಳಲುತ್ತಿದ್ದಾರೆ ಮತ್ತು ಅದರಷ್ಟೇ ಅಥವಾ ಅದಕ್ಕೂ ಹೆಚ್ಚಿನ ಜನರಿಗೆ ತಮಗೆ ಈ ಸಮಸ್ಯೆ ಇದೆ ಎಂಬುದೇ ತಿಳಿದಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ದನ ಹೇಳಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 40 ವರ್ಷ ವಯಸ್ಸಿನ ನಂತರ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕಣ್ಣಿನ ಒತ್ತಡ ಪರೀಕ್ಷಿಸಿಕೊಳ್ಳಲು ಮರೆಯಬಾರದು. ಮಧುಮೇಹ, ರಕ್ತದೊತ್ತಡ ಹಾಗೂ ಸಮೀಪ ದೃಷ್ಟಿದೋಷವಿರುವವರಲ್ಲಿ ಗ್ಲಾಕೋಮಾ ಆಗುವ ಸಂಭವ ಹೆಚ್ಚು ಇರುತ್ತದೆ ಮತ್ತು ಕಣ್ಣಿನ ತೊಂದರೆ ಕಂಡು ಬಂದಲ್ಲಿ ತಕ್ಷಣವೇ ಪರೀಕ್ಷೆಗೆ ಒಳಗಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಅಂಧತ್ವ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವೀರೇಂದ್ರಕುಮಾರ ಮಾತನಾಡಿ, ಮನೆಯಲ್ಲಿ ಯಾರಾದರೂ ಗ್ಲಾಕೋಮಾದಿಂದ ಬಳಲುತ್ತಿದ್ದರೆ ಆ ಮನೆಯ ಇತರ ಸದಸ್ಯರು ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ವಿ.ಇಂದ್ರಾಣಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ್‌ಕುಮಾರಿ, ಸಿಬ್ಬಂದಿ ಗಂಗಾಧರ, ತಂಗಮ್ಮ, ಶಾಂತಮ್ಮ, ಪ್ರಿಯಾಂಕಾ ಇತರರಿದ್ದರು.