ಅತ್ಯಾಚಾರಿಗಳ ಬಂಧನಕ್ಕೆ ಒತ್ತಡ

ಬಳ್ಳಾರಿ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದ ಬಾಲಕಿ ಅತ್ಯಾಚಾರ, ಕೊಲೆ ಖಂಡಿಸಿ ಎಐಡಿಎಸ್‌ಒ, ಎಐಡಿವೈಒ ಮತ್ತು ಎಐಎಂಎಸ್‌ಎಸ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ಗಡಗಿ ಚನ್ನಪ್ಪ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಹೋಬಳಿ ಮಟ್ಟದ ಕ್ರೀಡಾಕೂಟ ಮುಗಿಸಿಕೊಂಡು ಬಾಲಕಿ ಮನೆಗೆ ತೆರಳುತ್ತಿರುವ ವೇಳೆ ಯುವಕರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸರ್ಕಾರಗಳು ಕ್ರಮಕ್ಕೆ ಮುಂದಾಗದಿರುವುದು ಖಂಡನೀಯ. ವರದಿಯೊಂದರ ಪ್ರಕಾರ ಮಹಿಳೆಯರಿಗೆ ಅಸುರಕ್ಷಿತ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ದಿನೇದಿನೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅಶ್ಲೀಲ ಸಿನಿಮಾಗಳಿಂದ ಇಂತಹ ಘಟನೆಗಳು ಹೆಚ್ಚುತ್ತಿದ್ದು, ಅಶ್ಲೀಲ ಅಂತರ್ಜಾಲ ತಾಣಗಳು, ಸಿನಿಮಾಗಳನ್ನು ನಿಷೇಧಿಸಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜಸ್ಟಿಸ್ ವರ್ಮಾ ಕಮಿಟಿಯ ಶಿಫಾರಸನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಎಐಎಂಎಸ್‌ಎಸ್‌ನ ಜಿಲ್ಲಾ ಅಧ್ಯಕ್ಷೆ ಎ.ಶಾಂತಾ, ಜಿಲ್ಲಾ ಕಾರ್ಯದರ್ಶಿ ಕೆ.ಎಂ.ಈಶ್ವರಿ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಎರ‌್ರಿಸ್ವಾಮಿ, ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಗೋವಿಂದ್, ವಿ.ಎನ್‌ಜಗದೀಶ್, ರವಿಕಿರಣ್, ಗುರಳ್ಳಿ ರಾಜಾ, ಈರಣ್ಣ, ಮಂಜು, ನಿಂಗರಾಜ್, ಭಾರ್ಗವಿ, ವಿದ್ಯಾ, ರೇಖಾ ಇತರರಿದ್ದರು.