ಬಿಜೆಪಿಯಿಂದ ವೆಂಕಟೇಶ್ ಪ್ರಸಾದ್ ಫೈನಲ್?

ಸೋಮವಾರ ನಾಗೇಂದ್ರ ರಾಜೀನಾಮೆ ಸಾಧ್ಯತೆ

ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶ್ ಪ್ರಸಾದ್‌ಗೆ ಬಿಜೆಪಿ ಟಿಕೆಟ್ ಕೊಡಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಶಾಸಕ ಬಿ.ಶ್ರೀರಾಮುಲು, ಮಾಜಿ ಸಚಿವ ಜನಾರ್ದನರೆಡ್ಡಿ ಜತೆ ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಚರ್ಚೆ ನಡೆಸಿ ಬಿ.ವೆಂಕಟೇಶ್ ಪ್ರಸಾದ್‌ಗೆ ಟಿಕೆಟ್ ದೃಢಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಬಿ.ವೆಂಕಟೇಶ್ ಪ್ರಸಾದ್‌ಗೆ ಟಿಕೆಟ್ ನೀಡಬೇಕೆಂದರೆ ಬಿ.ನಾಗೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕರು ಷರತ್ತು ವಿಧಿಸಿದ್ದರು ಎನ್ನಲಾಗಿತ್ತು. ಈ ಪ್ರಕಾರ ಶಾಸಕ ಬಿ.ನಾಗೇಂದ್ರ ಸೋಮವಾರ ರಾಜೀನಾಮೆ ನೀಡಲಿದ್ದಾರೆ. ಬಿ.ವೆಂಕಟೇಶ್ ಪ್ರಸಾದ್ ಜಿಲ್ಲೆಯ ಬಿಜೆಪಿ ಮುಖಂಡರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬೆಂಬಲ ಕೋರಿದ್ದಾರೆ ಬಿಜೆಪಿ ಮೂಲಗಳು ತಿಳಿಸಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಹಾಗೂ ಸಹೋದರ ಬಿ.ವೆಂಕಟೇಶ್ ಪ್ರಸಾದ್‌ಗೆ ಬಿಜೆಪಿ ಟಿಕೆಟ್ ಪಡೆಯುವ ಬಗ್ಗೆ ಶಾಸಕ ನಾಗೇಂದ್ರ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ. ಆದರೆ, ಶಾಸಕ ನಾಗೇಂದ್ರ ಆಪ್ತ ಮೂಲಗಳ ಪ್ರಕಾರ ಬಿಜೆಪಿ ಟಿಕೆಟ್‌ಗೆ ಸಂಬಂಧಿಸಿದಂತೆ ಬೆಳವಣಿಗೆಗಳು ನಡೆದಿರುವುದು ನಿಜ ಎಂದು ತಿಳಿಸಿವೆ.