ಬಳ್ಳಾರಿ ಉಪ ಚುನಾವಣೆ ಅಡ್ರೆಸ್ ಇರುವ, ಇಲ್ಲದಿರುವವರ ನಡುವಿನ ಕದನ: ಶ್ರೀರಾಮುಲು

ಬಳ್ಳಾರಿ: ಗಣಿ ನಾಡಿನ ಲೋಕಾಸಭಾ ಉಪ ಚುನಾವಣೆ ಅಡ್ರೆಸ್ ಇರುವ ಜೆ. ಶಾಂತಾ ಹಾಗೂ ಅಡ್ರೆಸ್ ಇಲ್ಲದ ಉಗ್ರಪ್ಪ ನಡುವಿನ ಹೋರಾಟ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ಬಣ್ಣಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆ. ಶಾಂತಾ ಈ ಮಣ್ಣಿನ ಮಗಳು. ನಾವು ಕ್ಷೇತ್ರದ ಜನರ ಸೇವೆ ಮಾಡಿದ್ದೇವೆ. ಬಿಜೆಪಿಗೆ ಗಣಿ ನಾಡಿನಲ್ಲಿ ಭದ್ರ ಬುನಾದಿ ಇದೆ. ನೂರಕ್ಕೆ ನೂರರಷ್ಟು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದುವರೆಗೂ ಉಗ್ರಪ್ಪ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗೆದ್ದಿಲ್ಲ. ನಾಮ ನಿರ್ದೇಶಿತರಾಗಿ ಅಧಿಕಾರ ಅನುಭವಿಸಿದ್ದಾರಷ್ಟೇ. ಬಳ್ಳಾರಿಗೆ ಕಾಂಗ್ರೆಸ್​​ನವರು ಸಚಿವ ಸ್ಥಾನ ಕೂಡ ಕೊಟ್ಟಿಲ್ಲ. ಜಿಲ್ಲೆಯ ಜನ ಇದನ್ನು ಮರೆಯಲ್ಲ ಎಂದು ಟೀಕಿಸಿದರು.

ನನಗೆ ಕಾನೂನು ಪಾಂಡಿತ್ಯ ಇದೆ ಎಂದು ಉಗ್ರಪ್ಪ ಎರಡು ಕಡೆ ಮತ ಚಲಾಯಿಸಿ ಕಾನೂನು ಉಲ್ಲಂಘಿಸಿದ್ದರು. ಇವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಸರ್ಕಾರವಿದೆ ಎಂಬ ಅಹಾಂಕಾರದಿಂದ ಬಳ್ಳಾರಿಗೆ ಬಂದಿದ್ದಾರೆ. ಆದರೆ, ನವೆಂಬರ್ ಮೂರರ ನಂತರ ಮೈತ್ರಿ ಸರ್ಕಾರ ಪತನ ಆಗಲಿದೆ. ನಾನು ಮೊಣಕಾಲ್ಮೂರು ಹಾಗೂ ಬದಾಮಿಯಲ್ಲಿ ಸ್ಪರ್ಧಿಸಿದ್ದು ಪಕ್ಷದ‌ ತೀರ್ಮಾನ. ಅಧಿಕಾರಕ್ಕಾಗಿ ನಾನು ಬೇರೆ ಕಡೆ ಹೋಗಿಲ್ಲ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)