ಗಣಿನಾಡಿನಲ್ಲಿ ಲೋಕ ಸಮರ ಶಾಂತಿಯುತ

ಬಳ್ಳಾರಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಕ್ಷೇತ್ರದ 11 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಇದೀಗ ಕ್ಷೇತ್ರದ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.

ಬೆಳಗ್ಗೆ ಮತದಾನ ಮಂದಗತಿಯಲ್ಲಿ ಆರಂಭವಾಯಿತು. ಕೆಲವು ಮತಗಟ್ಟೆಗಳಲ್ಲಿ ಮತದಾರರು ಬಾರದ ಹಿನ್ನೆಲೆಯಲ್ಲಿ ಸಿಬ್ಬಂದಿ ಸುಮ್ಮನೆ ಕುಳಿತಿದ್ದು ಕಂಡುಬಂತು. ತಾಲೂಕಿನ ವೈ.ಕಗ್ಗಲ್ಲು ಗ್ರಾಮದಲ್ಲಿ ಮತಯಂತ್ರ ಸಮಸ್ಯೆ ಕಾಣಿಸಿಕೊಂಡಿತ್ತು. ನಗರದ ಸರಳಾದೇವಿ ಪದವಿ ಕಾಲೇಜಿನ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ 20 ನಿಮಿಷ ತಡವಾಗಿ ಮತದಾನ ಆರಂಭವಾಯಿತು. ನಗರದ ಸತ್ಯನಾರಾಯಣಪೇಟೆಯ ಮತಗಟ್ಟೆಯಲ್ಲಿ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟಿರುವ ಆರೋಪ ಕೇಳಿಬಂತು.

ಶ್ರೀಧರಗಡ್ಡೆ ಗ್ರಾಮದಲ್ಲಿ ಮತದಾರರು ಮತಗಟ್ಟೆಯಿಂದ ರಸ್ತೆವರೆಗೆ ಸಾಲು ನಿಂತಿದ್ದರು. ಸಂಗನಕಲ್ಲು ಮತಗಟ್ಟೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಲು ನಿಂತು ಮತ ಚಲಾಯಿಸಿದರು. ಕೆಲವರು ಉರಿಬಿಸಿಲಲ್ಲೇ ಸಾಲಲ್ಲಿ ನಿಂತು ಮತಚಲಾಯಿಸುವ ಉತ್ಸಾಹ ತೋರಿದರು. ಕೆಲವು ಮತಗಟ್ಟೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ನಿಯೋಜಿಸಲಾಗಿತ್ತು.

ಗಣ್ಯರ ಮತದಾನ:ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಕಲ್ಯಾಣಸ್ವಾಮೀಜಿ ಮತ ಚಲಾಯಿಸಿದರು. ಶಾಸಕರಾದ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಎಂ.ಎಲ್ಸಿಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ನಗರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ, ಪುತ್ರ ಕಿರೀಟಿ, ಪುತ್ರಿ ಬ್ರಹ್ಮಣಿ ಹವಂಭಾವಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಲಂಡನ್‌ನಿಂದ ಬಂದ ರೆಡ್ಡಿ ಪುತ್ರ:ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಪುತ್ರ ಕಿರೀಟಿ ಲಂಡನ್‌ನಿಂದ ಬಂದು ಮತಚಲಾಯಿಸಿದರು. ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಿರೀಟಿ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆಗೆ ನಮ್ಮೊಂದಿಗೆ ಮತ ಚಲಾಯಿಸಲು ಅವಕಾಶ ಇಲ್ಲದಿರುವುದು ನೋವುಂಟು ಮಾಡಿದೆ. ನಾನು ರಾಜ್ಯಶಾಸ್ತ್ರ ಅಧ್ಯಯನ ಮಾಡುತ್ತಿದ್ದು ಜನರ ಸೇವೆ ಮಾಡುವ ಆಸೆ ಇದೆ. ಆದರೆ, ನಟನಾಗುವ ಆಸೆಯಿದ್ದು ಮೊದಲ ಆದ್ಯತೆ ಚಿತ್ರರಂಗಕ್ಕೆ ನೀಡುತ್ತೇನೆ ಎಂದು ಹೇಳಿದರು.

ದೇವೇಂದ್ರಪ್ಪ ಮತ ಚಲಾವಣೆ: ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಪತ್ನಿ, ಕಾಂಗ್ರೆಸ್ ಜಿಪಂ ಸದಸ್ಯೆ ಸುಶೀಲಮ್ಮ ಜತೆ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟಿನಲ್ಲಿ ಮತ ಹೊಂದಿದ್ದಾರೆ. ಮಂಗಳವಾರ ಬೆಳಗ್ಗೆ ಗುಗ್ಗರಹಟ್ಟಿಯ ಬಾಡಿಗೆ ನಿವಾಸದಲ್ಲಿ ಪೂಜೆ ಸಲ್ಲಿಸಿದ ಬಳಿಕ ಉಗ್ರಪ್ಪ ಕ್ಷೇತ್ರದ ವಿವಿಧೆಡೆ ಸಂಚರಿಸಿದರು.

ಹೃದಯಘಾತದಿಂದ ಚುನಾವಣೆ ಸಿಬ್ಬಂದಿ ಸಾವು

ಸಿರಗುಪ್ಪ: ತಾಲೂಕಿನಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ಬಂದಿದ್ದ ಮತಗಟ್ಟೆ ಅಧಿಕಾರಿ ತಿಪ್ಪೇಸ್ವಾಮಿ(50) ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದಾರೆ. ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ಸ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿದ್ದ ತಿಪ್ಪೇಸ್ವಾಮಿ ಹೆಚ್ಚುವರಿ ಕಾಯ್ದಿರಿಸಿದ ಸಿಬ್ಬಂದಿಯಾಗಿದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಕ್ಷಣ ನಗರದ ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡುಹೋಗುವಾಗ ಮೃತಪಟ್ಟಿದ್ದಾರೆ. ತಿಪ್ಪೇಸ್ವಾಮಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬೇರೆಯವರನ್ನು ಕರ್ತವ್ಯಕ್ಕೆ ಕಳುಹಿಸಿ ತಿಪ್ಪೇಸ್ವಾಮಿಗೆ ಹೆಚ್ಚುವರಿ ಸಿಬ್ಬಂದಿಯಾಗಿ ನೇಮಿಸಲಾಗಿತ್ತು ಎಂದು ತಹಸೀಲ್ದಾರ್ ದಯಾನಂದಪಾಟೀಲ್ ಮಾಹಿತಿ ನೀಡಿದ್ದಾರೆ.

ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನಿರ್ಧಾರ ವೈಯಕ್ತಿಕ ವಿಚಾರವಾಗಿದೆ. ಇದರಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಕ್ಷದಿಂದ ಎಲ್ಲ ಸ್ಥಾನಮಾನ ಪಡೆದು ಪಕ್ಷಕ್ಕೆ ತಿರುಗಿಬೀಳುವುದು ಸರಿಯಲ್ಲ. ಕಾಂಗ್ರೆಸ್ ಇಂಥ ವರ್ತನೆಯನ್ನು ಸಹಿಸಿಕೊಳ್ಳುವುದಿಲ್ಲ.
| ಕೆ.ಸಿ.ಕೊಂಡಯ್ಯ ಎಂಎಲ್ಸಿ

ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ನನಗೆ ತಿಳಿದಿಲ್ಲ. ರಾಜೀನಾಮೆ ಬಗ್ಗೆ ರಮೇಶ್ ಜಾರಕಿಹೊಳಿ ನನ್ನ ಜತೆ ಚರ್ಚಿಸಿಲ್ಲ. ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆ ಕಾರಣಕ್ಕೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆಯಲು ನಿರ್ಧರಿಸಬಹುದು.
| ಬಿ.ನಾಗೇಂದ್ರ ಗ್ರಾಮೀಣ ಶಾಸಕ

ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದರೆ ಸ್ವಾಗತ. ರಮೇಶ್ ಜಾರಕಿಹೊಳಿ ಜತೆ ಬಳ್ಳಾರಿ ಜಿಲ್ಲೆಯ ಕೆಲವು ಶಾಸಕರು ಕೂಡ ಬಿಜೆಪಿಗೆ ಬರುತ್ತಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶಾಸಕರು ಬಿಜೆಪಿಗೆ ವಾಪಸ್ ಆಗುತ್ತಾರೆ.
| ಜಿ.ಸೋಮಶೇಖರರೆಡ್ಡಿ ನಗರ ಶಾಸಕ

ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ತುಂಬಾ ಬದಲಾವಣೆ ಆಗಲಿದೆ. ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಗುತ್ತದೆ. ಸರ್ಕಾರ ಪತನದ ಬಳಿಕ ಕಾಂಗ್ರೆಸ್ಸಿನ ಕೆಲವು ಶಾಸಕರು ಸ್ವತಃ ಬಿಜೆಪಿಗೆ ಬರಲಿದ್ದಾರೆ.
| ಬಿ.ಶ್ರೀರಾಮುಲು ಶಾಸಕ