ಬಳ್ಳಾರಿ ಕ್ಷೇತ್ರದಲ್ಲಿ 17.51 ಲಕ್ಷ ಮತದಾರರು

1925 ಮತಗಟ್ಟೆಗಳು, 10907 ಸಿಬ್ಬಂದಿ ನಿಯೋಜನೆ | *ಡಿಸಿ ರಾಮಪ್ರಸಾತ್ ಮನೋಹರ್ ಮಾಹಿತಿ

ಬಳ್ಳಾರಿ: ಜಿಲ್ಲೆಯಲ್ಲಿ ಒಟ್ಟು 21.63 ಲಕ್ಷ ಮತದಾರರಿದ್ದಾರೆ. ಈ ಪೈಕಿ 17.51 ಲಕ್ಷ ಮತದಾರರು ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವಿ.ರಾಮಪ್ರಸಾತ್ ಮನೋಹರ್ ಹಾಗೂ ಎಸ್ಪಿ ಲಕ್ಷ್ಮಣ್ ನಿಂಬರಗಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಏ.23ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಸಿರಗುಪ್ಪ ಹಾಗೂ ಹರಪನಹಳ್ಳಿ ತಾಲೂಕು ಸೇರಿ ಜಿಲ್ಲೆಯಲ್ಲಿ 10.78 ಲಕ್ಷ ಪುರುಷ ಹಾಗೂ 10.85 ಲಕ್ಷ ಮಹಿಳಾ ಮತದಾರರಿದ್ದಾರೆ. ಈ ಪೈಕಿ 8.71 ಲಕ್ಷ ಪುರುಷ ಹಾಗೂ 8.80 ಲಕ್ಷ ಮಹಿಳಾ ಮತದಾರರು 278 ಇತರ ಮತದಾರರಲ್ಲಿ 232 ಇತರ ಮತದಾರರು ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

2687 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು (ಪಿಆರ್‌ಒ), 2667 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 5553 ಮತಗಟ್ಟೆ ಅಧಿಕಾರಿಗಳು, ಸಖಿ ಮತಗಟ್ಟೆಗೆ 76 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಎರಡು ಹಂತದ ತರಬೇತಿ ನೀಡಲಾಗಿದ್ದು, ಏ.18ರಂದು ಮೂರನೇ ಹಂತದ ತರಬೇತಿ ನೀಡಲಾಗುವುದು. ತಲಾ 2313 ಕಂಟ್ರೋಲ್ ಹಾಗೂ ಬ್ಯಾಲೆಟ್ ಯೂನಿಟ್‌ಗಳು, 2509 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

ಇವಿಎಂಗಳ ಜೋಡಣೆ ಹಾಗೂ ಸಿದ್ಧತೆ ಕಾರ್ಯ ಪೂರ್ಣಗೊಂಡಿದೆ. ಮತದಾರರ ಚೀಟಿಗಳ ಹಂಚಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಮತದಾನಕ್ಕೆ ಮತದಾರರ ಚೀಟಿ ಕಡ್ಡಾಯವಲ್ಲ. ಮತದಾರರ ಗುರುತಿನ ಚೀಟಿ ಸೇರಿ ಆಯೋಗ ನಿಗದಿಪಡಿಸಿರುವ 11 ಗುರುತಿನ ಚೀಟಿಗಳ ಪೈಕಿ ಒಂದನ್ನು ಮತದಾನಕ್ಕೆ ತರಬೇಕು. ಮತದಾರರ ಚೀಟಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ದೂ.ಸಂ. 1950 ಗೆ ಸಂಪರ್ಕಿಸಬೇಕು ಎಂದರು.

425 ಸರ್ಕಾರಿ ಬಸ್‌ಗಳು, 109 ಮಿನಿ ಬಸ್‌ಗಳು, 83 ಕ್ಯಾಬ್, ಜೀಪ್ ಸೇರಿ ಒಟ್ಟು 615 ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸಿ ವಿಜಿಲ್ ಆ್ಯಪ್ ಮೂಲಕ 90, ದೂ.ಸಂ.1950 ಮೂಲಕ 1903 ದೂರುಗಳು ದಾಖಲಾಗಿವೆ. ಸುವಿಧ ಆ್ಯಪ್ ಮೂಲಕ 168 ಅನುಮತಿ ನೀಡಲಾಗಿದೆ. 10907 ಸಿಬ್ಬಂದಿ ಸೇರಿ 15406 ಜನರು ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಮತದಾನ ಬಹಿಷ್ಕರಿಸುವುದಾಗಿ ಹೇಳಿದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ. ಒಂದೆರಡು ಕಡೆ ಸಮಸ್ಯೆ ಬಗೆಹರಿದಿಲ್ಲ. ಅಂಥ ಗ್ರಾಮಗಳಿಗೆ ನಾನು ಹಾಗೂ ಎಸ್ಪಿ ಭೇಟಿ ನೀಡುತ್ತೇವೆ. ಹರಗಿನಡೋಣಿ ಗ್ರಾಮದಲ್ಲಿ ನೀರಿನ ಯೋಜನೆಗೆ 36 ಕೋಟಿ ರೂ. ಬೇಕು. ಆದರೆ, ಈ ಹಂತದಲ್ಲಿ ಯಾವುದೇ ಭರವಸೆ ನೀಡಲು ಆಗುವುದಿಲ್ಲ. ಹರಗಿನಡೋಣಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಫ್ಲೈಯಿಂಗ್ ಸ್ಕ್ವಾಡ್, ಪೊಲೀಸ್ ಸೇರಿ ಇತರ ತಂಡಗಳು 16.60 ಲಕ್ಷ ರೂ. ನಗದು 1.95 ಕೋಟಿ ಮೌಲ್ಯದ 33841 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ 712, ಪೊಲೀಸ್ ಇಲಾಖೆಯಿಂದ 148 ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಗಳಿಂದ 13 ಒಟ್ಟು 873 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು. ಜಿಪಂ ಸಿಇಒ ಕೆ.ನಿತೀಶ್ ಹಾಜರಿದ್ದರು.

ಭದ್ರತೆಗೆ 4182 ಸಿಬ್ಬಂದಿ: ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾತನಾಡಿ, ತಲಾ ಒಬ್ಬ ಎಸ್ಪಿ, ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿ, 29 ಇನ್ಸ್‌ಪೆಕ್ಟರ್‌ಗಳು, 36 ಪಿಎಸ್‌ಐ, 154 ಎಎಸ್‌ಐ, 1639 ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್‌ಗಳು, 1419 ಗೃಹರಕ್ಷಕ ಸಿಬ್ಬಂದಿ ಸೇರಿ 4182 ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಒಂದುಅರೆಸೇನಾಪಡೆ ಜಿಲ್ಲೆಗೆ ಬಂದಿದೆ. ಇನ್ನೂ ನಾಲ್ಕು ಅರೆ ಸೇನಾಪಡೆ ಬರಲಿವೆ. 9 ಕೆಎಸ್‌ಆರ್‌ಪಿ ಹಾಗೂ 27 ಡಿಎಆರ್ ತುಕಡಿಗಳು ಕಾರ್ಯನಿರ್ವಹಿಸಲಿವೆ. 1804 ರೌಡಿಶೀಟರ್‌ಗಳು ಸೇರಿ 2547 ಜನರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. 42 ಜನರ ಗಡಿಪಾರು ಪ್ರಕ್ರಿಯೆ ಜಾರಿಯಲ್ಲಿದೆ. 1445 ಶಸ್ತ್ರಾಸ್ತ್ರಗಳನ್ನು ಡೆಪಾಸಿಟ್ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 20 ದಿನ ಭದ್ರತಾ ಸಿಬ್ಬಂದಿಯಿಂದ ಪಥ ಸಂಚಲನ ನಡೆದಿದೆ. ಎರಡು ಸಾವಿರಕ್ಕೂ ಹೆಚ್ಚು ಜನಸಂಪರ್ಕ ಸಭೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

423 ಪುರುಷ ಹಾಗೂ 14 ಮಹಿಳೆಯರು ಸೇರಿ 437 ಸೇವಾ ಮತದಾರರಿದ್ದಾರೆ. ಸೇವಾ ಮತದಾರರಿಗೆ ಆನ್‌ಲೈನ್ ಮೂಲಕ ಮತಚೀಟಿ ಕಳಿಸಲಾಗಿದೆ. 53 ಸಾವಿರ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1925 ಮತಗಟ್ಟೆಗಳಿವೆ. 1688 ಸಾಮಾನ್ಯ, 541 ಸೂಕ್ಷ್ಮ ಹಾಗೂ 236 ದುರ್ಬಲ (ವಲ್ನರೇಬಲ್) ಮತಗಟ್ಟೆಗಳಿವೆ. 140 ಮತಗಟ್ಟೆಗಳಲ್ಲಿ ನೇರ ಚಿತ್ರೀಕರಣ ವ್ಯವಸ್ಥೆ ಇರಲಿದೆ. 19 ಸಖಿ ಹಾಗೂ 1 ಅಂಗವಿಕಲ ಮತಗಟ್ಟೆ ಸ್ಥಾಪಿಸಲಾಗಿದೆ.
| ಡಾ.ರಾಮಪ್ರಸಾತ್ ಮನೋಹರ್ ಜಿಲ್ಲಾ ಚುನಾವಣಾಧಿಕಾರಿ

Leave a Reply

Your email address will not be published. Required fields are marked *