ಬಿಜೆಪಿಯಲ್ಲಿ ರಾಮುಲು ಫ್ಯಾಮಿಲಿಗೇ ಮಣೆ

<ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೇಳಿಕೆ>  ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ>

 

ಬಳ್ಳಾರಿ: ಲೋಕಸಭೆ ಉಪ ಚುನಾವಣೆ ಕಾಂಗ್ರೆಸ್ ಬಯಸಿರಲಿಲ್ಲ. ಶ್ರೀರಾಮುಲು ಕಾರಣದಿಂದ ನಿರಂತರ ಉಪ ಚುನಾವಣೆಗಳು ಬರುತ್ತಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿ ರೂಪನಗುಡಿ ಸೇರಿ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಶ್ರೀರಾಮುಲು ಕಾರಣದಿಂದ ಮೂರು ಉಪ ಚುನಾವಣೆ ನಡೆದಿವೆ. ಮೊಳಕಾಲ್ಮೂರಿಗೆ ಪಲಾಯನ ಮಾಡಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾರಣರಾಗಿದ್ದಾರೆ. ಉಪ ಚುನಾವಣೆಗೆ ಶ್ರೀರಾಮುಲು ತಮ್ಮ ಸಹೋದರಿಯನ್ನು ಕಣಕ್ಕಿಳಿಸಿದ್ದಾರೆ. ಚುನಾವಣೆಯಲ್ಲಿ ಶ್ರೀರಾಮುಲು ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲವೇ ಎಂದು ಉಗ್ರಪ್ಪ ಪ್ರಶ್ನಿಸಿದರು.

ಶ್ರೀರಾಮುಲು ಏನು ಕೆಲಸ ಮಾಡಿದ್ದಾರೆ ? ರೈತರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಸಾಲ ಮನ್ನಾ ಮಾಡಿ ಎಂದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾವೇನು ನೋಟು ಪ್ರಿಂಟ್ ಮಾಡುತ್ತೇವಾ ಎಂದು ಪ್ರಶ್ನಿಸುತ್ತಾರೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಉದ್ಯೋಗ ಕೇಳಿದರೆ ಪಕೋಡಾ ಮಾಡಿ ಎಂದು ಹೇಳುತ್ತಾರೆ. ನನ್ನನ್ನು ಆಯ್ಕೆ ಮಾಡಿದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನಾನು ರೈತರ ಸಾಲ ಮನ್ನಾ ಮಾಡಿಸುವೆ ಎಂದು ಉಗ್ರಪ್ಪ ಹೇಳಿದರು.

ಪ್ರಚಾರದ ವೇಳೆ ಉಗ್ರಪ್ಪ ಬೆಡಗು ವಿಚಾರವನ್ನು ಮತ್ತೆ ಪ್ರಸ್ತಾಪಿಸಿದರು. ಶ್ರೀರಾಮುಲು ಅವರದ್ದು ನಲಗೊತ್ತಲ ಬೆಡಗು ಆಗಿದ್ದು, ನಮಗೆ ಬೀಗರಾಗುತ್ತಾರೆ. ನಮ್ಮದು ಗುಜ್ಜಲ ಬೆಡಗು. ಶಾಸಕ ನಾಗೇಂದ್ರ ಅವರದ್ದು ಕೂಡ ಗುಜ್ಜಲ ಬೆಡಗು ಆಗಿದ್ದು ನನಗೆ ಸಹೋದರರಾಗುತ್ತಾರೆ ಎಂದು ಉಗ್ರಪ್ಪ ಹೇಳಿದರು. ಶಾಸಕ ಬಿ.ನಾಗೇಂದ್ರ, ಎಂಎಲ್ಸಿ ಐವಾನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಮೊಹ್ಮದ್ ರಫೀಕ್ ಹಾಗೂ ಇತರರು ಹಾಜರಿದ್ದರು.

ಪ್ರಚಾರಕ್ಕೆ ತೆರಳುವ ಮಾರ್ಗದಲ್ಲಿ ಉಗ್ರಪ್ಪ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು. ಬೆಳೆ ಹಾನಿ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಬೆಳೆ ಹಾನಿಯಾಗಿದೆ.