ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದ ಜೆ. ಶಾಂತಾ

ಬಳ್ಳಾರಿ: ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪೈಕಿ ನೇರ ಹಣಾಹಣಿಗೆ ಕಾರಣವಾಗಿರುವ ಬಳ್ಳಾರಿ ಲೋಕಸಭಾ ಚುನಾವಣೆ ಕಣ ರಂಗೇರಿದ್ದು, ಬಳ್ಳಾರಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಮತದಾನ ಮಾಡಿದರು.

ಬಳ್ಳಾರಿ ಎಸ್​​​ಪಿ ಸರ್ಕಲ್​ ಬಳಿಯ ದೇವಿನಗರದ ಮಹಿಳಾ,ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿರುವ ಮತಗಟ್ಟೆ ಸಂಖ್ಯೆ 52ಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಜೆ.ಶಾಂತಾ ಮತ ಚಲಾವಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಪ್ರತಿಯೊಬ್ಬರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಶ್ರೀರಾಮುಲುರವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಗೆ ಜನತೆ ಆಶೀರ್ವಾದ ಮಾಡಲಿದ್ದು, ಬಿಜೆಪಿ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿ ನಗರದ ವಿವಿಧ ಮತಗಟ್ಟೆಯಲ್ಲಿ ಮತದಾನ ಚುರುಕುಗೊಂಡಿದ್ದು, ಮತದಾನಕ್ಕೂ ಮುನ್ನ ಶಾಂತಾ ಅವರು ಟೆಂಪಲ್‌ ರನ್‌ ನಡೆಸಿದರು. ಬಳ್ಳಾರಿಯ ಕೋಟೆ ಆಂಜನೇಯ ದೇಗುಲಕ್ಕೆ ಪುತ್ರಿ ಜತೆ ಆಗಮಿಸಿದ ಶಾಂತಾ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು.

ಜಿಲ್ಲಾದ್ಯಂತ ಒಟ್ಟು 1,901 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪುರುಷರು 8,55,194, ಮಹಿಳೆಯರು 8,57,944 ಮತ್ತು ಇತರೆ 216 ಮತದಾರರು ಸೇರಿ ಒಟ್ಟು 17,13,354 ಮತದಾರರು ಇದ್ದಾರೆ. (ದಿಗ್ವಿಜಯ ನ್ಯೂಸ್)