ಬಡತನದ ಬೆಂಕಿಯಲ್ಲಿ ಅರಳಿದ ‘ಕುಸುಮಾ’

ಪಂಕ್ಚರ್ ಹಾಕುವ ಹುಡುಗಿ ರಾಜ್ಯಕ್ಕೆ ಫಸ್ಟ್ | ಐಎಎಸ್ ಮಾಡುವ ಆಸೆ ಹೊಂದಿರುವ ಕುಸುಮಾ

ಬಳ್ಳಾರಿ/ಕೊಟ್ಟೂರು: ಅಪ್ಪ ದೇವೇಂದ್ರಪ್ಪ ಸೈಕಲ್ ಪಂಕ್ಚರ್ ಅಂಗಡಿ ಇಟ್ಟುಕೊಂಡಿದ್ದಾರೆ. ವಿದ್ಯಾಭ್ಯಾಸದ ಬಿಡುವಿನ ವೇಳೆಯಲ್ಲಿ ಮಗಳು ಕೂಡ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಮೂಲಕ ಅಪ್ಪನಿಗೆ ನೆರವಾಗುತ್ತಿದ್ದಳು. ಇದೀಗ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಪಾಲಕರಷ್ಟೇ ಅಲ್ಲ ಇಡೀ ರಾಜ್ಯ ಮೆಚ್ಚುವಂತ ಸಾಧನೆ ಮಾಡಿದ್ದಾಳೆ ಕೊಟ್ಟೂರಿನ ಪಂಕ್ಚರ್ ಅಂಗಡಿ ದೇವೇಂದ್ರಪ್ಪನ ಪುತ್ರಿ ಕುಸುಮಾ ಉಜ್ಜಿನಿ.

ಬಡತನದ ಬೆಂಕಿಯಲ್ಲೇ ಅರಳಿದ ಸಾಧನೆ ಕುಸುಮಾಳದ್ದು. ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕುಸುಮಾ 600 ಅಂಕಗಳಿಗೆ 594 ಅಂಕಗಳನ್ನು ಪಡೆದಿದ್ದಾರೆ. ಐಚ್ಛಿಕ ಕನ್ನಡ, ಇತಿಹಾಸ ಹಾಗೂ ರಾಜ್ಯಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದರೆ ಕನ್ನಡ 96, ಸಂಸ್ಕೃತ ಹಾಗೂ ಶಿಕ್ಷಣ ವಿಷಯದಲ್ಲಿ 99 ಅಂಕಗಳನ್ನು ಪಡೆದಿದ್ದಾರೆ ಕುಸುಮಾ. ಕುಸುಮಾಗೆ ಒಬ್ಬ ಸಹೋದರ ಹಾಗೂ ಮೂರು ಜನ ಸಹೋದರಿಯರಿದ್ದಾರೆ. ತಂದೆಯ ಸೈಕಲ್ ಪಂಕ್ಚರ್ ಅಂಗಡಿಯಿಂದಲೇ ಕುಟುಂಬ ಸದಸ್ಯರ ಜೀವನ ನಡೆಯುತ್ತದೆ. ಆದರೂ, ದೇವೇಂದ್ರಪ್ಪ ಮಕ್ಕಳ ಶಿಕ್ಷಣಕ್ಕೆ ಕೊರತೆ ಮಾಡಿಲ್ಲ. ಅಕ್ಕಂದಿರಾದ ಕರಿಬಸಮ್ಮ ಎಂ.ಕಾಂ, ಕಾವ್ಯ ಬಿಎ.ಬಿ.ಎಡ್, ಪ್ರೇಮಾ ಬಿ.ಎಸ್ಸಿ ಹಾಗೂ ಸಹೋದರ ಮಾರುತಿ ಎಸ್ಸೆಸ್ಸೆಲ್ಸಿ ಓದಿದ್ದಾರೆ.

ಕೃಷಿಕನ ಪುತ್ರನಿಗೆ ಎರಡನೇ ಸ್ಥಾನ: ಕಲಾ ವಿಭಾಗದ ಎರಡನೇ ಸ್ಥಾನವನ್ನು ಇಂದು ಕಾಲೇಜಿನ ಮೂವರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಹೊಸಮನಿ ಚಂದ್ರಪ್ಪ, ನಾಗರಾಜ್ ಹಾಗೂ ಎಸ್.ಉಮೇಶ ತಲಾ 591 ಅಂಕಗಳನ್ನು ಪಡೆದಿದ್ದಾರೆ. ಕೊಟ್ಟೂರು ಸಮೀಪದ ಬೇವೂರು ಗ್ರಾಮದ ಹೊಸಮನಿ ಚಂದ್ರಪ್ಪ ಕೂಡ ಬಡ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಬಡತನದ ಕಾರಣಕ್ಕೆ ಹೊಸಮನಿ ಚಂದ್ರಪ್ಪ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದರು.

ಇಬ್ಬರಿಗೆ ಮೂರನೇ ರ‌್ಯಾಂಕ್ : ಕೆ.ಜಿ.ಸಚಿನ್ ಮತ್ತು ಎಚ್.ಸುರೇಶ್ 589 ಅಂಕಗಳೊಂದಿಗೆ ಮೂರನೇ ಸ್ಥಾನ, ಹುಚ್ಚಂಗೆಮ್ಮ , ನಂದೀಶ್ 588 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಹಾಗೂ ಅಂಗಡಿ ಸರಸ್ವತಿ 587 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದ 9 ಟಾಪರ್‌ಗಳು: ಕೊಟ್ಟೂರಿನ ಇಂದು ಕಾಲೇಜು ಕಲಾ ವಿಭಾಗದ ಟಾಪರ್‌ಗಳ ಕಾಲೇಜು ಎಂದು ಖ್ಯಾತಿ ಪಡೆದಿದೆ. 2015ರಲ್ಲಿ ನೇತ್ರಾವತಿ, 2016ರಲ್ಲಿ ಅನಿತಾ, 2017ರಲ್ಲಿ ಚೈತ್ರಾ, 2018ರಲ್ಲಿ ಎಸ್.ಸ್ವಾತಿ ಕಲಾ ವಿಭಾಗದ ಟಾಪರ್‌ಗಳಾಗಿದ್ದರು. ಪ್ರಸಕ್ತ ವರ್ಷ ಕಲಾ ವಿಭಾಗದಲ್ಲಿ ರಾಜ್ಯದ ಮೊದಲ 10 ಸ್ಥಾನಗಳ ಪೈಕಿ ಒಂಭತ್ತು ಇಂದು ಕಾಲೇಜಿನ ಪಾಲಾಗಿವೆ. ಟಾಪರ್‌ಗಳೆಲ್ಲ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಪಾಲಕರ ಪೈಕಿ ಬಹುತೇಕರು ಬಡವರು ಹಾಗೂ ಕೆಲವರು ಅವಿದ್ಯಾವಂತರು ಎಂಬುದು ಗಮನಾರ್ಹ.

ನಮ್ಮಪ್ಪನ ಸೈಕಲ್ ಅಂಗಡಿಯಲ್ಲಿ ಪಂಕ್ಚರ್ ಹಾಕಿ ನಾನು ಕಾಲೇಜಿಗೆ ಹೋಗುತ್ತಿದ್ದೆ. ಕಾಲೇಜಿನಲ್ಲಿ ಶ್ರದ್ಧೆಯಿಂದ ಕೇಳಿದ ಪಾಠವನ್ನು ಬಳಿಕ ಏಕಾಗ್ರತೆಯಿಂದ ಓದುತ್ತಿದ್ದೆ. ರಾಜ್ಯಕ್ಕೆ ಪ್ರಥಮ ಸ್ಥಾನ ಬರುತ್ತೇನೆ ಎಂದುಕೊಂಡಿರಲಿಲ್ಲ. ನನಗೆ ಇನ್ನೂ ಓದುವ ಹಂಬಲವಿದೆ. ನಮ್ಮದು ಬಡ ಕುಟುಂಬವಾಗಿದ್ದು ಆರ್ಥಿಕ ನೆರವು ಸಿಕ್ಕರೆ ಐಎಎಸ್ ಮಾಡುವ ಆಸೆ ಹೊಂದಿದ್ದೇನೆ.
| ಕುಸುಮಾ ಉಜ್ಜಿನಿ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ

25 ವರ್ಷ ಕಾರು ಚಾಲಕನಾಗಿದ್ದ ನಾನು ಬಳಿಕ ಸೈಕಲ್ ಪಂಕ್ಚರ್ ಅಂಗಡಿ ಇಟ್ಟುಕೊಂಡೆ. ನಾನು ಪಟ್ಟ ಕಷ್ಟ ನನ್ನ ಮಕ್ಕಳಿಗೆ ಬರಬಾರದು ಎಂಬ ಕಾರಣಕ್ಕೆ ಮಕ್ಕಳನ್ನು ಓದಿಸಿದ್ದೇನೆ. ನನ್ನ ಶ್ರಮ ಇದೀಗ ಸಾರ್ಥಕವಾಯಿತು. ಛಲಗಾರ್ತಿಯಾಗಿರುವ ಕುಸುಮಾ ಅಂದುಕೊಂಡಿದ್ದನ್ನು ಸಾಧಿಸಿದ್ದಾಳೆ. ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ತುಂಬಾ ಸಂತೋಷವಾಗಿದೆ.
| ಉಜ್ಜಿನಿ ದೇವೇಂದ್ರಪ್ಪ ಮತ್ತು ಜಯಮ್ಮ ಕುಸುಮಾ ತಂದೆ-ತಾಯಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 79ರಷ್ಟು ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೆ. ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ದ್ವಿತೀಯ ಸ್ಥಾನ ಬಂದಿದ್ದಕ್ಕೆ ನಿರಾಸೆಯಾಗಿದೆ. ಮುಂದೆ ಇನ್ನೂ ಚೆನ್ನಾಗಿ ಓದುವೆ.
| ಹೊಸಮನಿ ಚಂದ್ರಪ್ಪ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ

ನಮ್ಮ ಕಾಲೇಜಿನ ಸಿಬ್ಬಂದಿ ಶ್ರಮ ಹಾಗೂ ಪಾಲಕರ ಪ್ರೋತ್ಸಾಹದಿಂದ ವಿದ್ಯಾರ್ಥಿಗಳ ಯಶಸ್ಸು ಪಡೆದಿದ್ದಾರೆ.
|ವೀರಭದ್ರಪ್ಪ, ಇಂದು ಕಾಲೇಜಿನ ಪ್ರಾಚಾರ್ಯ