ಜನರ ಸಮಸ್ಯೆ ಆಲಿಸಲು ಅಧಿಕಾರಿಗಳಿಗೆ ತಾಪಂ ಇಒ ಸೂಚನೆ

ತಾಪಂ ಸಭಾಂಗಣದಲ್ಲಿ ಕೆಡಿಪಿ ಸಭೆ | ಕುಡಿವ ನೀರು, ವಿದ್ಯುತ್ ಸಮಸ್ಯೆ ಕುರಿತು ಚರ್ಚೆ

ಬಳ್ಳಾರಿ: ಭೀಕರ ಬರ ಆವರಿಸಿದ್ದು, ಈ ಬಾರಿಯೂ ಸಮರ್ಪಕವಾಗಿ ಮಳೆಯಾಗದ ಕಾರಣ ಜನರು ಸಮಸ್ಯೆ ಅನುಭವಿಸುತ್ತಿದ್ದು, ಸಮಸ್ಯೆ ಆಲಿಕೆಗೆ ಮೊದಲ ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಾನಕಿರಾಮ್ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ತಾಪಂ ವ್ಯಾಪ್ತಿಯ ವಿವಿಧೆಡೆ ವಿದ್ಯುತ್, ಕುಡಿವ ನೀರಿನ ಸಮಸ್ಯೆಯಿದೆ. ಈ ಕುರಿತು ಏನು ಕ್ರಮ ಜರುಗಿಸಿದ್ದೀರಿ ಎಂದು ಜೆಸ್ಕಾಂ ಮತ್ತು ಗ್ರಾಮೀಣ ಕುಡಿವ ನೀರು ವಿಭಾಗದ ಅಧಿಕಾರಿಗಳನ್ನು ಪ್ರಶ್ನಿಸಿದರು.

ಹರಗಿನಡೋಣೆ, ಬೆಳಗಲ್, ಬೆಳಗಲ್ಲು ತಾಂಡಾದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆ, ಗಾಳಿಗೆ ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದು, ಲೈನ್‌ಮೈನ್ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಜೆಸ್ಕಾಂ ಹಾಗೂ ಕುಡಿವ ನೀರು ವಿಭಾಗದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನಂತರ ವಿವಿಧ ಇಲಾಖೆಗಳ ಕುರಿತು ಸಂಕ್ಷಿಪ್ತವಾಗಿ ಚರ್ಚೆ ನಡೆಸಲಾಯಿತು. ಅಧ್ಯಕ್ಷೆ ರಮಂಜಾಬಿ, ಉಪಾಧ್ಯಕ್ಷೆ ಪುಷ್ಪಾವತಿ ಸಭೆಯಲ್ಲಿ ಮೌನಕ್ಕೆ ಜಾರಿದ್ದರು. ಇದಕ್ಕೂ ಮುನ್ನ ಕಳೆದ ಸಭೆಯಲ್ಲಿ ಚರ್ಚಿಸಿದ ಜೆಸ್ಕಾಂ, ಮೀನುಗಾರಿಕೆ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ನಂ.3 ಎಚ್‌ಎಲ್‌ಸಿ ಉಪವಿಭಾಗ, ಲೋಕಪಯೋಗಿ ಉಪವಿಭಾಗದ ಅನುಪಾಲನಾ ವರದಿ ಕುರಿತು ಚರ್ಚೆ ನಡೆಯಿತು.

ಮಾತಿನ ಚಕಮಕಿ
ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಪಿಡಿಒ ಮತ್ತು ಪಿಡಬ್ಲುೃಡಿ ಎಇಇ ನಡುವೆ ಮಾತಿನ ಚಕಮಕಿ ನಡೆಯಿತು. ಕುರುಗೋಡು ತಾಲೂಕಿನ ಓರ್‌ವೈ ಗ್ರಾಪಂ ಪಿಡಿಒ ವೆಂಕಟಮ್ಮ, ಹಲವು ತಿಂಗಳಿಂದ ನಮ್ಮ ಊರಿನ ರಸ್ತೆ ಸರಿಪಡಿಸುವಂತೆ ಮನವಿ ಮಾಡಿಕೊಂಡರೂ ಯಾರು ಕಿವಿಗೊಡುತ್ತಿಲ್ಲ. ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದಾಗ ಎಇಇ ಈ. ನಾಗದೇವ್ ಸಿಡಿಮಿಡಿಗೊಂಡು, ಗ್ರಾಪಂ ಅನುದಾನದಲ್ಲೇ ರಸ್ತೆ ಸರಿಪಡಿಸಿಕೊಳ್ಳಿ ಎಂದರು. ಇದರಿಂದ ಕೋಪಗೊಂಡ ಪಿಡಿಒ, ರಸ್ತೆಗೆ ಬಹಳಷ್ಟು ಅನುದಾನ ಬೇಕು, ಗ್ರಾಪಂ ಅನುದಾನದಲ್ಲಿ ಮಾಡಲು ಬರುವುದಿಲ್ಲ ಎಂದು ಮರಳಿ ಮಾತಿನ ಚಾಟಿಬಿಸಿದರು. ಮಾತಿನ ಮಧ್ಯೆ ಪ್ರವೇಶಿಸಿದ ಇಒ, ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿ ಎಂದು ಎಇಇಗೆ ಸೂಚಿಸಿದರು.

Leave a Reply

Your email address will not be published. Required fields are marked *