ಐತಿಹಾಸಿಕ ಹಂಪಿ ಉತ್ಸವಕ್ಕೆ ಅನುದಾನ ಬರ


ಎಂಟು ಕೋಟಿ ರೂ. ಪ್ರಸ್ತಾವನೆ ತಿರಸ್ಕರಿಸಿದ ಸರ್ಕಾರ; 2.10 ಕೋಟಿ ರೂ. ಮಾತ್ರ ಅನುದಾನ ಬಿಡುಗಡೆ

ವಿಜಯವಾಣಿ ವಿಶೇಷ

ಬಳ್ಳಾರಿ: ಹಂಪಿ ಉತ್ಸವ ಆಚರಣೆಗೆಂದು ಜಿಲ್ಲಾಡಳಿತ ಸಲ್ಲಿಸಿದ್ದ ಎಂಟು ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಈ ಮೂಲಕ ಅನುದಾನ ವಿಷಯದಲ್ಲೂ ಸರ್ಕಾರ ಉತ್ಸವವನ್ನು ಕಡೆಗಣಿಸಿದೆ.

ಉತ್ಸವಕ್ಕೆ ಚುನಾವಣೆ ನೀತಿ ಸಂಹಿತೆ, ಬರಗಾಲ, ಅನುದಾನ ಕೊರತೆ ಸೇರಿ ನಾನಾ ವಿಘ್ನಗಳು ಕಳೆದ ಮೂರು ತಿಂಗಳಿಂದ ಎದುರಾಗುತ್ತಲೇ ಇವೆ. ಈಗ ಎಂಟು ಕೋಟಿ ರೂ. ಪ್ರಸ್ತಾವನೆ ತಿರಸ್ಕರಿಸುವ ಮೂಲಕ ಮತ್ತೊಮ್ಮೆ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ 1.50 ಕೋಟಿ ರೂ. ಮತ್ತು ಕನ್ನಡ-ಸಂಸ್ಕೃತಿ ಇಲಾಖೆಗೆ 60 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ. ಈಗ ಎಂಟು ಕೋಟಿ ರೂ. ಪ್ರಸ್ತಾವನೆಯಲ್ಲಿ ಕೇವಲ 2.10 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಇಷ್ಟರಲ್ಲೆ ಉತ್ಸವ ತಯಾರಿ ನಡೆದಿದೆ ಎನ್ನಲಾಗಿದೆ.

ಒಂದೆಡೆ ಉತ್ಸವ ಆಚರಣೆ ದಿನಕ್ಕೊಂದು ತಿರುವು ಪಡೆಯುತ್ತಿದ್ದರೆ ಮತ್ತೊಂದೆಡೆ ವಿಶ್ವ ಮಟ್ಟದಲ್ಲಿ ಹಂಪಿ ಗಮನಸೆಳೆಯುತ್ತಿದೆ. ಈಚೆಗೆ ಏಷ್ಯದ ಅಗ್ರ ಐದು ಪ್ರವಾಸಿ ತಾಣಗಳಲ್ಲಿ ಹಂಪಿ ಸಹ ಒಂದಾಗಿದ್ದು, 2019ರ ಏಷ್ಯ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ವಿಶ್ವದ 52 ಪ್ರೇಕ್ಷಣಿಯ ಸ್ಥಳದಲ್ಲಿ ಹಂಪಿಗೆ ಎರಡನೆ ಸ್ಥಾನ ದೊರೆತಿದೆ. ಆದರೆ, ಇಂಥ ವಿಶ್ವವಿಖ್ಯಾತ ಹಂಪಿಯಲ್ಲಿ ಉತ್ಸವ ನಡೆಸಲು ಸರ್ಕಾರ ನಿರಾಸಕ್ತಿ ತೋರುತ್ತಿದೆ.

ಫೆ.15, 16ರಂದು ಹಂಪಿ ಉತ್ಸವ?

ಕಳೆದ ಮೂರು ತಿಂಗಳಿಂದ ಹಂಪಿ ಉತ್ಸವ ಆಚರಣೆ ಬಗ್ಗೆ ದಿನಾಂಕಗಳನ್ನು ಘೋಷಣೆ ಮಾಡುತ್ತಾ ಮುಂದೂಡಲಾಗಿದೆ. ಈ ಮುಂಚೆ ಜ.12 ಮತ್ತು 13ರಂದು ನಿಗದಿಪಡಿಸಲಾಗಿತ್ತು. ಈಗ ಪುನಃ ಫೆ.15 ಮತ್ತು 16ರಂದು ಉತ್ಸವ ನಡೆಸಲು ತೀರ್ಮಾನಿಸಿ ಸರ್ಕಾರಕ್ಕೆ ಕಳುಹಿಸಿದೆ. ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಣ್ಣಮೊತ್ತದಲ್ಲಿ ಆಚರಣೆ

ಹಿಂದಿನ ವರ್ಷಗಳಲ್ಲಿ ಸರ್ಕಾರವೇ ಕೋಟ್ಯಂತರ ರೂ. ವ್ಯಯಿಸಿ, ಅದ್ದೂರಿಯಾಗಿ ಆಚರಣೆ ಮಾಡಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ಸವ ಹೆಸರು ಮಾಡಿತ್ತು. ಆದರೆ, ಇತಿಹಾಸದಲ್ಲಿ ಮೊದಲ ಬಾರಿಗೆ ಕೇವಲ 2.10 ಕೋಟಿ ರೂ. ವೆಚ್ಚದಲ್ಲಿ ಉತ್ಸವದ ಆಚರಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಜತೆಗೆ ಸ್ಥಳೀಯ ಸಂಸ್ಥೆ, ಇಲಾಖೆಗಳಿಂದ ಮತ್ತಷ್ಟು ಅನುದಾನ ಕ್ರೋಡೀಕರಿಸಿ ಉತ್ಸವ ನಡೆಸುವಂತೆ ಸರ್ಕಾರ ಸೂಚಿಸಿದೆ.

ಹಂಪಿ ಉತ್ಸವ ಆಚರಣೆಗೆ ಜಿಲ್ಲಾಡಳಿತದಿಂದ ಎಂಟು ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ರಾಜ್ಯ ಹಣಕಾಸು ಇಲಾಖೆಯು ಸ್ಥಳೀಯ ಸಂಸ್ಥೆಗಳಿಂದ ಹಣ ಕ್ರೋಡೀಕರಿಸುವಂತೆ ಸೂಚಿಸಿದೆ. ಈಗಾಗಲೇ 2.10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಫೆ.15 ಮತ್ತು 16ರಂದು ಉತ್ಸವ ಆಚರಣೆಗೆ ನಿರ್ಧರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತವಾಗಿ ದಿನಾಂಕ ಘೋಷಣೆ ಮಾಡಲಿದ್ದಾರೆ.
| ರಾಮ್ ಪ್ರಸಾತ್ ಮನೋಹರ್, ಜಿಲ್ಲಾಧಿಕಾರಿ, ಬಳ್ಳಾರಿ

Leave a Reply

Your email address will not be published. Required fields are marked *