ರಾಷ್ಟ್ರೀಯ ವಿಪತ್ತು ಘೋಷಣೆಗೆ ಆಗ್ರಹ

ಬಳ್ಳಾರಿ ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ

ಬಳ್ಳಾರಿ: ರಾಜ್ಯದಲ್ಲಿನ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಗುರುವಾರ ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಡಿಸಿ ಕಚೇರಿ ಎದುರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಧರಣಿ ನಡೆಸಿದರು.

ಆಗಸ್ಟ್‌ನಲ್ಲಿ ಪ್ರವಾಹದಿಂದ 22 ಜಿಲ್ಲೆಗಳ 103 ತಾಲೂಕುಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಉತ್ಪನ್ನ ಕುಂಠಿತಗೊಂಡಿದ್ದು, ರಸ್ತೆ, ವಿದ್ಯುತ್ ಸರಬರಾಜು ಸೇವೆಯಲ್ಲಿ ವ್ಯತ್ಯಯವಾಗಿದೆ. ರಾಜ್ಯದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕಾಳಜಿ ಹಾಗೂ ಅನುದಾನದ ಅಗತ್ಯ ಇದೆ ಎಂದು ಆಗ್ರಹಿಸಲಾಯಿತು.

ಪ್ರವಾಹದಿಂದ 88 ಜನರು ಮೃತಪಟ್ಟಿದ್ದು 10 ಜನರು ನಾಪತ್ತೆಯಾಗಿದ್ದಾರೆ. ಏಳು ಲಕ್ಷ ಜನರು ನಿರ್ಗತಿಕರಾಗಿದ್ದಾರೆ. 2.37 ಲಕ್ಷ ಮನೆಗಳು ಜಖಂಗೊಂಡಿವೆ. ಈ ಪೈಕಿ 1.7 ಲಕ್ಷ ಮನೆಗಳು ಸಂಪೂರ್ಣ ಕುಸಿದಿವೆ. 7.28 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. 35 ಸಾವಿರ ಕಿ.ಮೀ. ರಸ್ತೆ, 2828 ಸೇತುವೆಗಳು, 57 ಸಾವಿರ ವಿದ್ಯುತ್ ಕಂಬಗಳು ಕುಸಿದಿವೆ. ಕೇಂದ್ರ ಹಣಕಾಸು, ಗೃಹ ಹಾಗೂ ಇತರ ಸಚಿವರು ಹಾಗೂ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ್ದರೂ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಹ ಸಂತ್ರಸ್ತರಿಗೆ ಮನೆಗಳ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. ನೀಡಬೇಕು. ಭಾಗಶಃ ಕುಸಿದು ಜೀವ ಭಯದಲ್ಲಿ ಬದುಕುತ್ತಿರುವ ಕುಟುಂಬದವರಿಗೂ ಮನೆಗಳ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ಮನೆಗಳ ನಿರ್ಮಾಣ ಆಗುವವರೆಗೆ ಎಲ್ಲ ಸೌಲಭ್ಯ ಹೊಂದಿರುವ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಮಾಡಬೇಕು. ಬೆಳೆ ಹಾನಿಗೆ ಪ್ರತಿ ಎಕರೆಗೆ 50 ಸಾವಿರ ರೂ. ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ಎಂಎಲ್ಸಿ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ಮಾಜಿ ಸಂಸದ ಕೋಳೂರು ಬಸವನಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ ಇತರರಿದ್ದರು..

Leave a Reply

Your email address will not be published. Required fields are marked *