ಕೃಷಿಯಿಂದ ದೂರವಾಗುತ್ತಿದ್ದಾರೆ ರೈತರು

< ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ.ಕಾರ್ತಿಕ್ ಕಳವಳ> ಕೇಂದ್ರ-ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ>

ಬಳ್ಳಾರಿ: ಕಾಲುವೆಗಳಿಗೆ ಅಸಮರ್ಪಕ ನೀರು ಪೂರೈಕೆ, ರಸಗೊಬ್ಬರ ಬೆಲೆ ಹೆಚ್ಚಳ, ಬೆಂಬಲ ಬೆಲೆಯಿಲ್ಲದೆ ಸೇರಿ ನಾನಾ ಸಮಸ್ಯೆಗಳಿಂದ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 10 ಲಕ್ಷ ರೈತರು ಕೃಷಿಯಿಂದ ದೂರ ಉಳಿಯುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಜೆ.ಕಾರ್ತಿಕ್ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿ ಅನೇಕ ತಿಂಗಳು ಕಳೆದರೂ ಈವರೆಗೆ ರೈತರ ಸಾಲಮನ್ನಾ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಸ್ವಾಮಿನಾಥನ್ ವರದಿ ಜಾರಿಗೊಳಿಸಿಲ್ಲ. ನಿತ್ಯ ರಸಗೊಬ್ಬರ ಬೆಲೆ ಗಗನಕ್ಕೇರುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ನೀರಿಲ್ಲದೆ, ಬೆಂಬಲ ಬೆಲೆಯಿಲ್ಲದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

13ರಂದು ಟಿಬಿ ಬೋರ್ಡ್ ಎದುರು ಪ್ರತಿಭಟನೆ :  ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಮಾರಾಟದ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ನಿಗದಿಯಾಗಿರುವ ಪ್ರಕಾರ 13 ಟಿಎಂಸಿ ಅಡಿ ನೀರಿನಲ್ಲಿ ಈಗಾಗಲೇ 6.75 ಟಿಎಂಸಿ ಅಡಿ ನೀರು ಒದಗಿಸಿದ್ದು, ಇನ್ನುಳಿದ 6.25 ಟಿಎಂಸಿ ಅಡಿ ನೀರನ್ನು ಎರಡನೇ ಬೆಳೆ ಬೇಸಿಗೆಗೆ ಒದಗಿಸಬೇಕು. ಆದರೆ ಟಿಬಿ ಬೋರ್ಡ್‌ನ ಅಧಿಕಾರಿಗಳು ಬೇಸಿಗೆ ಬೆಳೆಗೆ ನೀರಿಲ್ಲ ಎನ್ನುವುದರಿಂದ ರೈತರು ಕಂಗಲಾಗಿದ್ದಾರೆ. ಹೀಗಾಗಿ ನ.13ರಂದು ಹೊಸಪೇಟೆಯ ಟಿಬಿ ಬೋರ್ಡ್ ಎದುರು ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಬೇಸಿಗೆ ಬೆಳೆಗೆ ನೀರು ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುತ್ತಿದೆ ಎಂದರು.

ಭತ್ತ ಖರೀದಿ ಕೇಂದ್ರಕ್ಕೆ ಒತ್ತಡ:  ಜಿಲ್ಲೆಯ ಕಂಪ್ಲಿ, ಸಿರಗುಪ್ಪ, ಬಳ್ಳಾರಿ ತಾಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಈಗಾಗಲೇ ಭತ್ತ ಕಟಾವು ಹಂತಕ್ಕೆ ಬಂದಿದ್ದು, ದಲ್ಲಾಳಿಗಳ ಹಾವಳಿಯಿಂದ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಸಿಗದೇ ನಷ್ಟ ಅನುಭವಿಸುವಂತಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನಹರಿಸಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್, ಮುಖಂಡರಾದ ದೇವರೆಡ್ಡಿ, ವೀರಾ ರೆಡ್ಡಿ, ಖಾಸಿಂ ಸಾಬ್, ಸುದರ್ಶನ, ಎಲ್.ಎಸ್.ರುದ್ರಪ್ಪ, ಕೆ.ಸುರೇಶ್, ಎಂ.ರಾಮಚಂದ್ರಪ್ಪ, ಶ್ರೀನಿವಾಸ, ಕೆ.ರಮೇಶ, ಕಾಗೆ ಈರಣ್ಣ ಇತರರು ಆಗ್ರಹಿಸಿದರು.