ಜನಪ್ರತಿನಿಧಿಗಳಿಂದ ಕಾರ್ಟೂನಿನಂತೆ ವರ್ತನೆ- ರೈತ ಮುಖಂಡ ಪುರುಷೋತ್ತಮಗೌಡ ವ್ಯಂಗ್ಯ

ಮೇಲ್ಮಟ್ಟದ ಕಾಲುವೆ ಮೂಲಕ ನೀರು ಹರಿಸಲು ಒತ್ತಾಯ

ಬಳ್ಳಾರಿ: ಜಿಲ್ಲೆಯಲ್ಲಿ ನೀರಿನ ಪರಿಸ್ಥಿತಿ ಗಂಭೀರವಾಗಿದೆ. ಆದರೆ, ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಕಾರ್ಟೂನ್‌ಗಳಂತೆ ವರ್ತಿಸುತ್ತಿದ್ದಾರೆ. ಮಕ್ಕಳು ನಿಜವಾದ ಕಾರ್ಟೂನ್ ಕಾರ್ಯಕ್ರಮಗಳನ್ನು ಬಿಟ್ಟು ವಿಧಾನಸಭೆಯ ಕಲಾಪ ವೀಕ್ಷಿಸುವಂತಾಗಿದೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ವ್ಯಂಗ್ಯವಾಡಿದರು.

ತುಂಗಭದ್ರಾ ಜಲಾಶಯಕ್ಕೆ ಮಂಗಳವಾರದಿಂದ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷ ಅಣೆಕಟ್ಟೆಯಲ್ಲಿ ಈ ಸಂದರ್ಭದಲ್ಲಿ 94 ಟಿಎಂಸಿ ನೀರು ಸಂಗ್ರಹವಾಗಿದ್ದರಿಂದ ಕೃಷಿ ಚಟುವಟಿಕೆ ಆರಂಭವಾಗಿತ್ತು. ಪ್ರಸಕ್ತ ವರ್ಷ ಜಲಾಶಯದಲ್ಲಿ ನೀರಿನ ಕೊರತೆಯಿಂದ ರೈತರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ. 2017ರ ಬರ ಪರಿಸ್ಥಿತಿ ಮರುಕಳಿಸಿದೆ. ಕೃಷಿಗೆ ನೀರು ಇಲ್ಲ. ಕುಡಿಯಲು ಕೂಡ ನೀರು ಸರಬರಾಜು ಮಾಡುತ್ತಿಲ್ಲ. ತುಂಗಭದ್ರಾ ಎಡದಂಡೆ ನಾಲೆ ಮೂಲಕ ಕೊಪ್ಪಳ, ರಾಯಚೂರಿಗೆ ನೀರು ಪೂರೈಸಲಾಗುತ್ತಿದೆ. ಆದರೆ, ಬಳ್ಳಾರಿಗೆ ನೀರು ಪೂರೈಸಲು ನಿರ್ಲಕ್ಷೃ ವಹಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ತುಂಗಭದ್ರಾ ಕೆಳಮಟ್ಟದ ಕಾಲುವೆ ಆಧುನೀಕರಣ ಕಾಮಗಾರಿ ನಡೆದಿದೆ. ಮೇಲ್ಮಟ್ಟದ ಕಾಲುವೆ ಮೂಲಕ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಆಲಮಟ್ಟಿ, ಬಸವ ಸಾಗರ ಜಲಾಶಯ ಭರ್ತಿಯಾಗಿ ಆಂಧ್ರಕ್ಕೆ ನೀರು ಹರಿದುಹೋಗುತ್ತಿದೆ. ನದಿಗಳ ಜೋಡಣೆ, ಪಶ್ಚಿಮ ಘಟ್ಟದ ನದಿಗಳ ನೀರು ಸಮುದ್ರ ಪಾಲಾಗದಂತೆ ತಡೆಯುವ ಮೂಲಕ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಸಂಕಷ್ಟ ನೀಗಿಸಬೇಕು ಎಂದು ಆಗ್ರಹಿಸಿದರು.  

ಸದ್ಯಕ್ಕೆ ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ನೀರು ಪೂರೈಸಲು ಕ್ರಮಕೈಗೊಳ್ಳಬೇಕು. ತುಂಗಭದ್ರಾ ಜಲಾಶಯಕ್ಕೆ ಭದ್ರಾ ನದಿಯಿಂದ ನೀರು ಬರುತ್ತದೆ. ಬೆಂಗಳೂರಿಗೆ ಭದ್ರಾ ಮೇಲ್ದಂಡೆ ವ್ಯಾಪ್ತಿಯ ವಾಣಿ ವಿಲಾಸ ಸಾಗರದಿಂದ ನೀರು ಪಡೆದರೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ತ್ರಿವಳಿ ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಕುರಿತು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪುರುಷೋತ್ತಮಗೌಡ ಎಚ್ಚರಿಕೆ ನೀಡಿದರು. ರೈತ ಸಂಘದ ಪದಾಧಿಕಾರಿಗಳಾದ ಗಾದಿಲಿಂಗನಗೌಡ, ಸಣ್ಣ ಮಲ್ಲಪ್ಪ, ಶ್ರೀಧರ್, ಭೀಮನಗೌಡ, ಗೋವಿಂದಪ್ಪ, ಶರಣಗೌಡ, ದೊಡ್ಡ ದಾಸಪ್ಪ ಇತರರಿದ್ದರು.

Leave a Reply

Your email address will not be published. Required fields are marked *