ಬಳ್ಳಾರಿ ಜಿಲ್ಲೆಯಲ್ಲಿ ತುಂಬಾ ಒಳ್ಳೆಯ ಜನರಿದ್ದಾರೆ: ಸಚಿವ ಡಿಕೆಶಿ

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ತುಂಬಾ ಒಳ್ಳೆಯ ಜನರಿದ್ದಾರೆ. ಮೊದಲಿನಿಂದಲೂ ರಾಜಕೀಯ ಶಕ್ತಿ ಕೇಂದ್ರವಾಗಿರುವ ಈ ಜಿಲ್ಲೆಯಲ್ಲಿ ಸಂಪತ್ತು, ಸಂಸ್ಕೃತಿ, ಉತ್ತಮ ನೀರು ಹಾಗೂ ಕೃಷಿ ಇದೆ ಎಂದು ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ. ಶಿವಕುಮಾರ್​ ಅವರು ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಬಳಿಕ ಬುಧವಾರ ಬಳ್ಳಾರಿಗೆ ಭೇಟಿ ನೀಡಿ ಮಾತನಾಡಿದ ಅವರು ಬಳ್ಳಾರಿಗರು ಶಿಸ್ತು ಬದ್ಧ ಕೃಷಿಯನ್ನು ಅಳವಡಿಕೆ ಮಾಡಿಕೊಳ್ಳಬೇಕು. ನೀರು ಮತ್ತು‌ ವಿದ್ಯುತ್ ಸಂಪರ್ಕವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೃಷಿ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಾನು ಕೆಡಿಪಿ ಸಭೆ ಮಾಡುತ್ತಿಲ್ಲ. ಯಾವೊಬ್ಬ ಅಧಿಕಾರಿಗಳೂ ಕೇಂದ್ರ ಸ್ಥಾನದಲ್ಲಿ ಇರುತ್ತಿಲ್ಲ ಎಂಬ ಮಾಹಿತಿ ನನಗಿದೆ. ಇದು ಕೂಡಲೇ ನಿಲ್ಲಬೇಕು. ಎಲ್ಲ ಅನುಷ್ಟಾನಾಧಿಕಾರಿಗಳು ಆಯಾ ಕೇಂದ್ರ ಸ್ಥಾನದಲ್ಲಿ ಮನೆ ಹಾಗೂ ಕಚೇರಿ ಮಾಡಬೇಕು. ಈ ಬಗ್ಗೆ ಇಂದೇ ಸೂಚನೆ ನೀಡುತ್ತೇನೆ. ಯಾವ ತಾಲೂಕು ಮಟ್ಟದ ಅಧಿಕಾರಿಗಳೂ ಜಿಲ್ಲಾ ಕೇಂದ್ರದಿಂದ ಓಡಾಡುವಂತಿಲ್ಲ. ವಿಎ, ಆರ್​ಐ ಮತ್ತು ಪಿಡಿಒಗಳು ಕೂಡ ಕೇಂದ್ರ ಸ್ಥಾನದಲ್ಲೇ ವಾಸವಾಗಿರಬೇಕು ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ಕಾಮಗಾರಿ ನಡೆದರೂ ಆರಂಭದಿಂದ ಕೊನೆಯವರೆಗೂ ವಿಡಿಯೋ ಹಾಗೂ ಫೋಟೊ ಲಭ್ಯವಿರಬೇಕು. ಎಲ್ಲ ಆರ್​ಐ,‌ ಪಿಡಿಒ ಮತ್ತು ತಹಸೀಲ್ದಾರ್​ಗಳು ತಮ್ಮ ವಾಹನಕ್ಕೆ ಜಿಪಿಎಸ್ ಅಳವಡಿಸಿಕೊಳ್ಳಬೇಕು. ಎಲ್ಲ ಅಧಿಕಾರಿಗಳ ಚಲನಾವಲನಗಳು ಜಿಲ್ಲಾಧಿಕಾರಿಗಳಿಗೆ ಗೊತ್ತಾಗಬೇಕು ಎಂದು ಸೂಚಿಸಿದರು.

ಡಿಕೆಶಿಗೆ ಬಳ್ಳಾರಿ ಉಸ್ತುವಾರಿ ಕೊಟ್ಟಿರೋದು ಕಟುಕನ ಕೈಗೆ ಕುರಿ ಕೊಟ್ಟಂತೆ ಎಂಬ ಎಸ್​.ಆರ್​ ಹಿರೇಮಠ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಎಸ್. ಆರ್. ಹಿರೇಮಠ ಅವರು ಚುನಾವಣೆಗೆ ನಿಂತು ಸ್ಪರ್ಧೆ ಮಾಡಲಿ. ಅಕ್ರಮ ಗಣಿಗಾರಿಕೆ ಮಾಡಿರುವುದನ್ನು ಸಾಬೀತು ಮಾಡಿ ಗಲ್ಲಿಗೆ ಹಾಕಲಿ ಎಂದು ತಿರುಗೇಟು ನೀಡಿದರು.

ಮಹದಾಯಿ ನ್ಯಾಯಾಧಿಕರಣ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಅವರು, ನ್ಯಾಯಧೀಕರಣ ತನ್ನ ಶಿಫಾರಸುಗಳನ್ನು ಮೊದಲು ಕೋರ್ಟ್​ಗೆ ಸಲ್ಲಿಸಬೇಕಿತ್ತು. ಕೇಂದ್ರಕ್ಕೆ ಸಲ್ಲಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಕೋರ್ಟ್​ನಲ್ಲಿ ಆದೇಶ ಬರುವ ಮೊದಲೇ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದು ಈ ದೇಶದ ಕರಾಳ‌ ದಿನ. ನ್ಯಾಯಾಧಿಕರಣದ‌ ತೀರ್ಪಿನ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು. (ದಿಗ್ವಿಜಯ ನ್ಯೂಸ್​)