99 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

ಜಿಲ್ಲೆಯಲ್ಲಿ ಮಾ.21ರಿಂದ ಆರಂಭ 31154 ವಿದ್ಯಾರ್ಥಿಗಳು ನೋಂದಣಿ

ಬಳ್ಳಾರಿ: ಜಿಲ್ಲೆಯಲ್ಲಿ ಮಾ 21ರಿಂದ ಏ 4ರವರೆಗೆ 99 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. 16058 ಬಾಲಕರು ಹಾಗೂ 15096 ಬಾಲಕಿಯರು ಸೇರಿ ಒಟ್ಟು 31154 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿ.ರಾಮಪ್ರಸಾತ್ ಮನೋಹರ್ ವಿಡಿಯೋ ಸಂವಾದದಲ್ಲಿ ಪರೀಕ್ಷೆಯ ಮುಖ್ಯ ಅಧೀಕ್ಷಕರು, ತಹಸೀಲ್ದಾರ್‌ರು, ಬಿಇಒ, ಉಪ ಖಜನಾಧಿಕಾರಿಗಳೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆ ಬರೆಯಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು. ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದ ವೀಕ್ಷಕರನ್ನು ನೇಮಕ ಮಾಡಲಾಗುತ್ತಿದ್ದು, ವೀಕ್ಷಕರು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಸಂಚಾರಿ ಜಾಗೃತ ದಳ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳ ನೇಮಕ ಮಾಡಲಾಗಿದೆ.

ಬಳ್ಳಾರಿ ಪೂರ್ವ ವಲಯದಲ್ಲಿ 14, ಹಗರಿಬೊಮ್ಮನಹಳ್ಳಿಯಲ್ಲಿ 9, ಹೊಸಪೇಟೆ 17, ಹಡಗಲಿ 10, ಕೂಡ್ಲಿಗಿ 15, ಸಂಡೂರು 07, ಸಿರುಗುಪ್ಪ 11 ಮತ್ತು ಕುರುಗೋಡು ವಲಯದಲ್ಲಿ 22 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷೆ ವೇಳೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಝೆರಾಕ್ಸ್ ಸೆಂಟರ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ರಾಮಪ್ರಸಾತ್ ಮನೋಹರ್ ತಿಳಿಸಿದರು. ಜಿಪಂ ಸಿಇಒ ಕೆ.ನಿತೀಶ್, ಡಿಡಿಪಿಐ ಎ.ಶ್ರೀಧರನ್, ಖಜಾನೆ ಇಲಾಖೆ ಅಧಿಕಾರಿ ರವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.