ದೋಣಿಮಲೈ ಆರಂಭಿಸಲು ಒತ್ತಡ

ಎಐಟಿಯುಸಿ, ಐಎನ್‌ಟಿಯುಸಿ ಸಂಘಟನೆಯಿಂದ ಪ್ರತಿಭಟನೆ

ಬಳ್ಳಾರಿ: ಕೇಂದ್ರ ಸರ್ಕಾರ ಒಡೆತನದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಸಂಡೂರು ತಾಲೂಕಿನ ದೋಣಿಮಲೈನ ಗಣಿಗಾರಿಕೆಯನ್ನು ಆರಂಭಿಸಲು ಆಗ್ರಹಿಸಿ ಎಐಟಿಯುಸಿ ಹಾಗೂ ಐಎನ್‌ಟಿಯುಸಿ ಸೇರಿ ವಿವಿಧ ಕಾರ್ಮಿಕ ಸಂಘಟನೆಗಳು ನಗರದ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ಸೋಮವಾರ ನಡೆಸಿದವು.

ದೋಣಿಮಲೈನ ಗಣಿಗಾರಿಕೆಯನ್ನು ಮುಂದಿನ 20ವರ್ಷಗಳ ಅವಧಿಗೆ ಗಣಿ ಪರವಾನಗಿ ನವೀಕರಣ ಮಾಡುವ ವೇಳೆ ವಹಿವಾಟಿನ ಮೌಲ್ಯದಲ್ಲಿ ಶೇ.80 ಹಣ ಪ್ರೀಮಿಯಂ ರೂಪದಲ್ಲಿ ಪಾವತಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ದೋಣಿಮಲೈನ ಗಣಿಗಾರಿಕೆಯನ್ನು 2018 ನ.4ರಿಂದ ಸ್ಥಗಿತಗೊಳಿಸಿದೆ. ಇದರಿಂದ ಸುಮಾರು 4 ಸಾವಿರ ಕಾರ್ಮಿಕರು ಬೀದಿಪಾಲಾಗಿದ್ದಾರೆ.

ದೋಣಿಮಲೈ ಐರನ್ ಓರ್ ಮೈನ್ಸ್ ಮುಚ್ಚಿಸಲು ಅನೇಕ ಖಾಸಗಿ ಕಂಪನಿಗಳ ಕೈವಾಡವಿದ್ದು, ಗಣಿಗಾರಿಕೆ ಶಾಶ್ವತವಾಗಿ ಮುಚ್ಚುವ, ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ದೋಣಿಮಲೈ ಗಣಿಗಾರಿಕೆ ಆಡಳಿತ ಮಂಡಳಿಯಿಂದ ಸಿಎಂ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೂಡಲೇ ರಾಜ್ಯ ಸರ್ಕಾರ ತನ್ನ ಆದೇಶ ರದ್ದುಗೊಳಿಸಿ, ದೋಣಿಮಲೈ ಐರನ್ ಓರ್ ಮೈನ್ಸ್ ಆರಂಭಿಸಲು ಮುಂದಾಗಬೇಕು ಎಂದು ಆಗ್ರಹಿಸಿ, ಡಿಸಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಎಂ.ಆರ್.ಇಸ್ಮಾಯಿಲ್, ಬಿ.ಸೋಮಶೇಖರ್, ವಿ.ಕರಿಬಸಪ್ಪ, ಪಿ.ವೀರಭದ್ರಪ್ಪ, ಪಿ.ಭಾಸ್ಕರ್, ಎಸ್.ಗೋಪಿ, ಟಿ.ಜಿ.ವಿಠ್ಠಲ್, ಆದಿಮೂರ್ತಿ, ತಿಪ್ಪೇಸ್ವಾಮಿ, ಗಂಗಾಧರ, ಗುರುಮೂರ್ತಿ, ಕಟ್ಟೆ ಬಸಪ್ಪ, ಸತ್ಯಬಾಬು ಇದ್ದರು.

Leave a Reply

Your email address will not be published. Required fields are marked *