ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ

ಭೂಮಿ ಪರಭಾರೆಗೆ ತೀವ್ರ ಖಂಡನೆ | ತೋರಣಗಲ್ ರಸ್ತೆ ಸಂಚಾರ ತಡೆ ಜು.6ಕ್ಕೆ

ಬಳ್ಳಾರಿ: ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಜಿಂದಾಲ್ ಕಂಪನಿಯಿಂದ ರೈತರಿಗೆ ಅನ್ಯಾಯವಾಗಿದೆ. ಕನ್ನಡಿಗರನ್ನು ಕಡೆಗಣಿಸಲಾಗಿದೆ. ಹೀಗಾಗಿ ಜುಲೈ 6ರಂದು ಜಿಂದಾಲ್ ಹತ್ತಿರದ ತೋರಣಗಲ್ ರಸ್ತೆಯಲ್ಲಿ ಸಂಚಾರ ತಡೆ ನಡೆಸಲಾಗುವುದು. ಜುಲೈ 15ಕ್ಕೆ ಕನ್ನಡ ಸಮ್ಮೇಳನ ಹಮ್ಮಿಕೊಂಡು, ಬಳ್ಳಾರಿ ಜಿಲ್ಲೆ ಬಂದ್‌ಗೆ ಕರೆ ಕೊಡುವ ಕುರಿತು ಚರ್ಚಿಸಿ ದಿನಾಂಕ ಪ್ರಕಟಿಸಲಾಗುವುದು ಎಂದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಎನ್.ಚಂದ್ರಪ್ಪ ನೇತೃತ್ವದಲ್ಲಿ ನಗರದ ಕಾಗೆ ಪಾರ್ಕ್‌ನಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಮುಖಂಡರಾದ ಕೆ.ಎರಿಸ್ವಾಮಿ, ಗಿರೀಶಗೌಡ, ಆರ್.ವಿಜಯಕುಮಾರ್, ರಾಜೇಶ ರೆಡ್ಡಿ, ವಿರೂಪಾಕ್ಷಗೌಡ, ಬಿ.ಹೊನ್ನೂರಪ್ಪ, ಕೆೆ.ಎಸ್.ಅಶೋಕ್‌ಕುಮಾರ್, ಹುಡೇಕರ್ ರಾಜೇಶ, ಎನ್.ರವಿತೇಜ, ರಾಕೇಶ ಸಾಗರ್, ಗೋವರ್ಧನ, ವಿವಿಧ ಕನ್ನಡಪರ ಸಂಘಟನೆಯ ಹೈ-ಕ, ಮುಂಬೈ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಜಿಂದಾಲ್ ಕಂಪನಿ ಜತೆಗೆ ಮಾಡಿಕೊಂಡಿರುವ ಒಪ್ಪಂದವನ್ನು ಕೂಡಲೇ ಸರ್ಕಾರ ಬಹಿರಂಪಡಿಸಬೇಕು. ಹತ್ತು ಎಕರೆಗಿಂತ ಹೆಚ್ಚು ಭೂಮಿಯನ್ನು ಲೀಜ್ ಆಧಾರದ ಮೇಲೆಯೇ ನೀಡಬೇಕು ಎಂಬ ನಿಯಮವನ್ನು ಯಾರ ಹಿತಾಸಕ್ತಿಗೆ ಸಮ್ಮಿಶ್ರ ಸರ್ಕಾರ ಗಾಳಿಗೆ ತೂರಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಿಂದಿನ ಲೋಕಾಯುಕ್ತ ಸಂತೋಷ ಹೆಗಡೆ ಜಿಂದಾಲ್‌ಗೆ ನೀಡಿರುವ ಭೂಮಿಯಲ್ಲಿ ಖನಿಜ ಸಂಪತ್ತುಯಿದೆ ಎಂದು ತಿಳಿಸಿದ್ದರೂ, ಸರ್ಕಾರ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಮುತುವರ್ಜಿ ವಹಿಸದೆ ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವುದರ ಹಿಂದೆ ದೊಡ್ಡ ಷಡಂತ್ಯವಿದೆ.
| ವಾಟಾಳ್ ನಾಗರಾಜ್ ಅಧ್ಯಕ್ಷ, ಕನ್ನಡ ಒಕ್ಕೂಟ

Leave a Reply

Your email address will not be published. Required fields are marked *