ಜುಲೈನಲ್ಲಿ ಬಳ್ಳಾರಿ ಸಾಂಸ್ಕೃತಿಕ ಉತ್ಸವ ಆಯೋಜನೆ

ಉತ್ಸವ ಸಮಿತಿ ಸದಸ್ಯ ಜಯಪ್ರಕಾಶ ಗುಪ್ತಾ ಹೇಳಿಕೆ | ಜಿಲ್ಲೆಯ ಎಲ್ಲ ಕಲಾವಿದರು ಒಂದೇ ವೇದಿಕೆಯಲ್ಲಿ

ಬಳ್ಳಾರಿ: ಜಿಲ್ಲೆ ಚಿತ್ರಕಲೆ, ಕರಕುಶಲ, ಸಾಹಿತ್ಯ, ಸಂಗೀತ, ನೃತ್ಯ, ಜಾನಪದ, ರಂಗಭೂಮಿ ಹಾಗೂ ಇತರ ಕಲೆ, ಸಂಸ್ಕೃತಿಗೆ ಖ್ಯಾತಿಯಾಗಿದೆ. ಎಲ್ಲ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಜುಲೈನಲ್ಲಿ ಬಳ್ಳಾರಿ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ ಎಂದು ಉತ್ಸವ ನಿರ್ವಹಣಾ ಸಮಿತಿ ಸದಸ್ಯ ಜಯಪ್ರಕಾಶ ಗುಪ್ತಾ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜು.12ರಿಂದ 14ರವರೆಗೆ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ನೃತ್ಯ, ಸಂಗೀತ, ಕವಿಗೋಷ್ಠಿ, ಹಾಸ್ಯ, ಜಾದೂ, ಮಿಮಿಕ್ರಿ ಹಾಗೂ ದೇಶ ಭಕ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿವೆ. 1500 ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನಾಡಗೀತೆ ಗಾಯನ, 500 ಮೀ ಉದ್ದದ ಡ್ರಾಯಿಂಗ್ ಕಾಗದದ ಮೇಲೆ ಜನರಿಂದ ಚಿತ್ರ ಬಿಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ಸವ ನಿರ್ವಹಣೆಗೆ 32 ವಿವಿಧ ಸಮಿತಿಗಳನ್ನು ರಚಿಸುವುದಾಗಿ ಮಾಹಿತಿ ನೀಡಿದರು.

ಬಿಸಿಲಹಳ್ಳಿ ಬಸವರಾಜ ಮಾತನಾಡಿ, ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಕಲಾವಿದರ ಮಾಹಿತಿಯನ್ನು ವೆಬ್‌ಸೈಟ್ ಮೂಲಕ ಪರಿಚಯಿಸಲಾಗುವುದು. ಜಿಲ್ಲೆಯ ಮಾಹಿತಿ ಕುರಿತು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ರಾಜ್ಯಮಟ್ಟದ ಚಿತ್ರಕಲಾ ಸಂತೆ ಆಯೋಜನೆ ಮೂಲಕ ಚಿತ್ರಕಲೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು. ಫೋಟೊಗ್ರಾಫಿ ಸಂತೆ, ಸಾಹಿತ್ಯ ಸಂತೆ ಸೇರಿ ಜಿಲ್ಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಉತ್ಸವ ನಿರ್ವಹಣಾ ಸಮಿತಿ ಸದಸ್ಯರಾದ ಉದ್ಯಮಿ ಪೋಲಾ ರಾಧಾಕೃಷ್ಣ, ಗುರುರಾಜ್, ತಿಪ್ಪೇರುದ್ರ ಇತರರು ಇದ್ದರು.

Leave a Reply

Your email address will not be published. Required fields are marked *