ಬಳ್ಳಾರಿಯಲ್ಲಿ ಈ ಬಾರಿ ಕಾಂಗ್ರೆಸ್ ಆಟ ನಡೆಯಲ್ಲ

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಹೇಳಿಕೆ

ಹೊಸಪೇಟೆ: ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರ ಪಕ್ಷದ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ನೇತೃತ್ವದಲ್ಲಿ ನಗರದ ಏಳುಕೇರಿ, ಟಿಬಿಡ್ಯಾಂ ಸೇರಿ ಇತರೆಡೆ ಸೋಮವಾರ ಪ್ರಚಾರ ನಡೆಯಿತು.

ರಾಣಿ ಸಂಯುಕ್ತಾ ಮಾತನಾಡಿ, ಉಪಚುನಾವಣೆಯಲ್ಲಿ ರಾಜ್ಯ ಸರ್ಕಾರವೇ ಬಳ್ಳಾರಿಯಲ್ಲಿ ಬೀಡು ಬಿಟ್ಟು ಕಾಂಗ್ರೆಸ್ ಗೆಲುವಿಗೆ ತಂತ್ರ ನಡೆಸಿತ್ತು. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ಸುನಾಮಿ ಎದ್ದಿದ್ದು, ಅದರಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಲಿದೆ. ಬಿಜೆಪಿ ಅಭ್ಯರ್ಥಿ ಹೆಸರು ಮಾತ್ರ. ಆದರೆ, ಐದು ವರ್ಷಗಳ ಜನರ ಆಡಳಿತ ಮೆಚ್ಚಿದ ಜನರು ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕೆಂಬ ಒಲವು ಹೊಂದಿದ್ದಾರೆ. ಹೀಗಾಗಿ, ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಮತದಾರರು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದು ಶತಸಿದ್ಧವಾಗಿದ್ದು, ಈ ಭಾಗದ ಸಮಸ್ಯೆ ನಿವಾರಣೆಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.

ವಿಜಯನಗರ ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ನಗರದ ಹೊರವಲಯದಲ್ಲಿ ಸಾಕಷ್ಟು ಕೈಗಾರಿಕೆಗಳಿದ್ದರೂ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಅನಂತ ಪದ್ಮನಾಭ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಂಬಾನಹಳ್ಳಿ ವಸಂತಕುಮಾರ್, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಯೋಗಲಕ್ಷ್ಮಿ, ಪ್ರ.ಕಾರ್ಯದರ್ಶಿ ನಾಗೇನಹಳ್ಳಿ ಭಾರತಿ ಬಸವನಗೌಡ, ದೇವರಮನಿ ಶ್ರೀನಿವಾಸ, ರಾಜವರ್ಧನ, ಪ್ರಿಯಾಂಕಾ ಜೈನ್, ರಂಗಮ್ಮ, ನಗರಸಭೆ ಮಾಜಿ ಸದಸ್ಯ ಗೋವಿಂದರಾಜ, ಅಪ್ಪಳರಾಜ, ಸುಜಾತಾ, ಪದ್ಮಾವತಿ ಇದ್ದರು.