ಉಗ್ರಪ್ಪ-ಶ್ರೀರಾಮುಲು ಬೀಗರ ಜಗಳ್ಬಂದಿ

ಬಳ್ಳಾರಿ/ಹೂವಿನಹಡಗಲಿ: ಬಳ್ಳಾರಿ ಉಪ ಚುನಾವಣೆ ಪ್ರಚಾರ ಕಾವೇರುತ್ತಿದ್ದು ಬೀಗರ ಜಗಳವಾಗಿ ಮಾರ್ಪಟ್ಟಿದೆ. ಮೈತ್ರಿ ಪಕ್ಷಗಳ ಕಡೆಯಿಂದ ಕಾಂಗ್ರೆಸ್​ನ ವಿ.ಎಸ್. ಉಗ್ರಪ್ಪ ಹಾಗೂ ಬಿಜೆಪಿಯಿಂದ ಜೆ.ಶಾಂತಾ ಇಲ್ಲಿ ಅಭ್ಯರ್ಥಿಗಳಾಗಿದ್ದು, ಇದೀಗ ಉಗ್ರಪ್ಪ ಹಾಗೂ ಮಾಜಿ ಸಂಸದ-ಶಾಸಕ ಬಿ.ಶ್ರೀರಾಮುಲು ಮಧ್ಯೆ ವಾಗ್ದಾಳಿ ರಂಗೇರಿದೆ.

ಬಳ್ಳಾರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ಶಾಸಕ ಶ್ರೀರಾಮುಲು ನನಗೆ ಬೀಗರಾಗುತ್ತಾರೆ. ನನ್ನದು ಗುಜ್ಜಲ ಬೆಡಗು. ಶ್ರೀರಾಮುಲುರದ್ದು ನಲಗೊತ್ತಲು ಬೆಡಗು. ನಾನು ಕೂಡ ವಾಲ್ಮೀಕಿ ಸಮುದಾಯದವನು. ಶ್ರೀರಾಮುಲು ಮಹರ್ಷಿ ವಾಲ್ಮೀಕಿಯನ್ನು ಅರ್ಥ ಮಾಡಿಕೊಂಡಿ ದ್ದರೆ ಜಾತಿಗಳ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದಿದ್ದಾರೆ.

ಇತ್ತ ಹೂವಿನಹಡಗಲಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ರಾಜಕೀಯದಲ್ಲಿ ಕೆಲವರು ಸಂಬಂಧ ಗಳನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ. ಅಣ್ಣ, ಬೀಗರು, ಮಾವ ಎನ್ನುತ್ತಲೇ ಲಾಭ ಪಡೆಯಲು ಹೊರಟ್ಟಿದ್ದಾರೆ. ನಾನು ಯಾವುದೇ ಜಾತಿ ಬಣ್ಣ ಕಟ್ಟಿ ರಾಜಕಾರಣ ಮಾಡಿಲ್ಲ. ನಮ್ಮೊಳಗೆ ಜಗಳ ಹಚ್ಚುವ ಪ್ರಯತ್ನ ಮಾಡಬೇಡಿ ಎಂದು ಡಿ.ಕೆ.ಶಿವಕುಮಾರ್​ಗೆ ಹೇಳಿದ್ದೇನೆ ಎನ್ನುವ ಮೂಲಕ ಉಗ್ರಪ್ಪಗೆ ಪ್ರತ್ಯುತ್ತರ ನೀಡಿದ್ದಾರೆ.