ಲೋಕಸಭೆಗೆ ಬಿಜೆಪಿ ಪ್ರಭಾರಿ-ಸಂಚಾಲಕರ ನೇಮಕ

ಬೆಂಗಳೂರು: ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ರಾಜ್ಯ ಬಿಜೆಪಿ, ಎಲ್ಲ ಲೋಕಸಭಾ ಕ್ಷೇತ್ರಗಳಿಗೂ ಪ್ರಭಾರಿ ಹಾಗೂ ಸಂಚಾಲಕರನ್ನು ನೇಮಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇಮಕ ಆದೇಶ ಹೊರಡಿಸಿದ್ದಾರೆ. ಸದ್ಯ ಶಾಸಕರಾಗಿರುವ ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ, ಸುನಿಲ್ ಕುಮಾರ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಜಗದೀಶ ಶೆಟ್ಟರ್, ಅರವಿಂದ ಲಿಂಬಾವಳಿ, ಸಿ.ಸಿ. ಪಾಟೀಲ್, ಡಾ. ಅಶ್ವತ್ಥನಾರಾಯಣ, ಆರ್. ಅಶೋಕ್ ಸೇರಿ ಅನೇಕರಿಗೆ ಪಕ್ಕದ ಅಥವಾ ಮತ್ತೊಂದು ಕ್ಷೇತ್ರದ ಹೊಣೆ ನೀಡಲಾಗಿದೆ.

ಚುನಾವಣೆ ವೇಳೆ ಬಂಡಾಯದ ಹಿನ್ನೆಲೆಯಲ್ಲಿ ಅಮಾನತಾಗಿದ್ದ ಅಮರನಾಥ ಪಾಟೀಲ ಅವರಿಗೆ ಬೀದರ್ ಹೊಣೆ ನೀಡಲಾಗಿದೆ.

ಕೆಲವು ಸುಳಿವು ನೀಡಿದ ಪಟ್ಟಿ: ಸಾಮಾನ್ಯವಾಗಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಪ್ರಭಾರಿ-ಸಂಚಾಲಕರನ್ನು ನೇಮಕ ಮಾಡುವಾಗ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ಅನುಭವಿ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುತ್ತದೆ. ಸ್ವತಃ ಅಭ್ಯರ್ಥಿಯಾದರೆ ಕ್ಷೇತ್ರದ ಇತರೆ ಸಂಘಟನಾತ್ಮಕ ಚಟುವಟಿಕೆ ಗಮನಿಸುವುದು ಸಾಧ್ಯವಿಲ್ಲ ಎಂದು ಬಿಜೆಪಿಯಲ್ಲಿ ಈ ನಿರ್ಧಾರ ಮಾಡಲಾಗುತ್ತದೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ರಾಜ್ಯ ರಾಜಕೀಯಕ್ಕೆ ವಾಪಸಾಗುವ ಬಯಕೆ ಇದೆ ಎಂದು ವರಿಷ್ಠರಿಗೆ ತಿಳಿಸಿರುವುದಾಗಿ ಶೋಭಾ ಕರಂದ್ಲಾಜೆ ಹೇಳಿದ್ದರು. ಆದರೆ ಕ್ಷೇತ್ರದ ಹೊಣೆ ನೀಡುವಾಗ ಅವರ ಹೆಸರನ್ನು ಪರಿಗಣಿಸಿಲ್ಲ ಎಂದಮೇಲೆ ಲೋಕಸಭೆಯಲ್ಲಿ ಟಿಕೆಟ್ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅದೇ ರೀತಿ, ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಆರ್. ಅಶೋಕ್ ಅಭ್ಯರ್ಥಿ ಆದರೆ ಹೇಗೆ ಎಂಬ ಕುರಿತೂ ಅನೇಕ ಚರ್ಚೆಗಳು ನಡೆದಿದ್ದವು. ಆದರೆ ಅಶೋಕ್ ಅವರಿಗೆ ಬೆಂಗಳೂರು ದಕ್ಷಿಣ ಸಂಚಾಲಕ ಹೊಣೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಶೋಕ ಅವರು ವಿಧಾನಸಭೆಯಲ್ಲೇ ಉಳಿಯುವ ಮುನ್ಸೂಚನೆ ಕಂಡಿದೆ.