ನೀರು, ಬೆಳಕಿಲ್ಲದ ಬೆಳ್ಳಾರೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ

ಬಾಲಚಂದ್ರ ಕೋಟೆ ಬೆಳ್ಳಾರೆ

ಪ್ರತಿ ಮನೆಗೂ ಮೂಲ ಅವಶ್ಯಕತೆಗಳಾದ ಶೌಚಗೃಹ, ನೀರು, ವಿದ್ಯುತ್ ವ್ಯವಸ್ಥೆ ನೀಡುವುದು ಗ್ರಾಮಾಭಿವೃದ್ಧಿ ಪರಿಕಲ್ಪನೆ. ಆದರೆ ಬೆಳ್ಳಾರೆ ಪೇಟೆಯಿಂದ ಸ್ವಲ್ಪ ದೂರದ ಬಂಗ್ಲೆಗುಡ್ಡೆಯಲ್ಲಿರುವ ಬ್ರಿಟಿಷರ ಕಾಲದ ಬೆಳ್ಳಾರೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಶೌಚಗೃಹ, ನೀರು, ವಿದ್ಯುತ್ ವ್ಯವಸ್ಥೆ ಇಲ್ಲ! ಶಿಥಿಲಗೊಂಡಿರುವ ಕಟ್ಟಡ ಶೀಘ್ರ ಕುಸಿದು ಬೀಳುವ ಸ್ಥಿತಿಯಲ್ಲಿದೆ.

ಈ ಕಚೇರಿಯನ್ನು ಬೆಳ್ಳಾರೆ-ಸುಳ್ಯ ರಸ್ತೆಯ ಪಶು ಚಿಕಿತ್ಸಾಲಯ ಬಳಿ ಇರುವ ಪಂಚಾಯಿತಿ ಉದ್ಯೋಗಿಗಳ ವಾಸಸ್ಥಳದ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಿ ಲೋಕಸಭಾ ಚುನಾವಣೆಗೂ ಮುನ್ನ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಲಾಗಿತ್ತು. ಆದರೆ ಇದುವರೆಗೂ ಸ್ಥಳಾಂತರ ಪ್ರಕ್ರಿಯೆ ನಡೆದಿಲ್ಲ. ಮಳೆಗಾಲದಲ್ಲಿ ಕಚೇರಿ ಸೋರುತ್ತಿದ್ದು, ನೀರು ಬಿದ್ದರೆ ಎಲ್ಲ ದಾಖಲೆಗಳಿಗೆ ಹಾನಿಯಾಗುವ ಅಪಾಯವಿದೆ.

ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡ ಶಿಥಿಲವಾಗಿ ಸೋರುತ್ತಿದೆ. ಹಿಂಬದಿ ಛಾವಣಿ ಭಾಗಶಃ ಕುಸಿದಿದ್ದು ಗಾಳಿ -ಮಳೆಯಿಂದ ಕಟ್ಟಡಕ್ಕೆ ಹಾನಿಯಾಗುವ ಅಪಾಯವಿದೆ. ಬಾವಲಿಗಳು ರಾತ್ರಿ ಕಚೇರಿಯೊಳಗೆ ಠಿಕಾಣಿ ಹೂಡುವುದರಿಂದ ಸ್ವಚ್ಛತೆಯೇ ಬಹು ದೊಡ್ಡ ಸವಾಲು. ಸ್ಥಳೀಯರು ಕಟ್ಟಡದ ಸ್ಥಳಾಂತರಕ್ಕೆ ಪದೇಪದೆ ಆಗ್ರಹಿಸುತ್ತಲೆ ಇದ್ದಾರೆ. ಉದ್ಯೋಗಿಗಳ ವಾಸಸ್ಥಳದ ಕಟ್ಟಡ ದುರಸ್ಥಿಗೊಳಿಸುವ ಕಾರ್ಯಕ್ಕೆ ಬೆಳ್ಳಾರೆ ಗ್ರಾಮ ಪಂಚಾಯಿತಿ ಮುಂದಾಗಿದೆ. ಶೀಘ್ರ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸ್ಥಳಾಂತರಗೊಂಡಲ್ಲಿ ಜನರಿಗೆ ಅನುಕೂಲವಾಗುತ್ತದೆ.

ರಸ್ತೆಯೂ ಸಂಚಾರಕ್ಕೆ ಯೋಗ್ಯವಿಲ್ಲ
ಸ್ವಚ್ಛ ಗ್ರಾಮದ ಅನ್ವಯ ಪ್ರತಿ ಮನೆಗೂ ಶೌಚಗೃಹ ಕಡ್ಡಾಯ. ಬಂಗ್ಲಗುಡ್ಡೆಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಇಲ್ಲಿ ಶೌಚಗೃಹ ವ್ಯವಸ್ಥೆಯಿಲ್ಲ. ಕುಡಿಯುವ ನೀರು ಬೇಕಾದರೆ ಹಣ ಕೊಟ್ಟು ಖರೀದಿಸಬೇಕು. ಮಳೆಗಾಲದಲ್ಲಿ ಕತ್ತಲಲ್ಲೇ ಕರ್ತವ್ಯ ನಿರ್ವಹಿಸಬೇಕು. ಗ್ರಾಮ ಲೆಕ್ಕಾಧಿಕಾರಿ ಕಚೇರಿ ಪೇಟೆಯಿಂದ ಒಂದು ಕಿ.ಮೀ ದೂರವಿದೆ. ಬೆಳ್ಳಾರೆ ಪ್ರಾಥಮಿಕ ಶಾಲೆ ಹಿಂಭಾಗದಿಂದ ಸುತ್ತು ಬಳಸಿ ಬರಬೇಕು. ಕಚೇರಿಗೆ ಬರುವ ಮಣ್ಣಿನ ರಸ್ತೆಯೂ ಸಂಚಾರಕ್ಕೆ ಯೋಗ್ಯವಿಲ್ಲ. ಇದರಿಂದ ಅಂಗವಿಕಲರು ಕಚೇರಿಯೆಡೆಗೆ ಬರಲು ಹಿಂಜರಿಯುತ್ತಿದ್ದಾರೆ.

ಪಂಚಾಯಿತಿ ಉದ್ಯೋಗಿಗಳ ವಾಸಸ್ಥಳದ ಕಟ್ಟಡವನ್ನು ತ್ವರಿತವಾಗಿ ದುರಸ್ತಿಗೊಳಿಸಿ ಅಲ್ಲಿಗೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಸ್ಥಳಾಂತರಗೊಳಿಸಲು ಸೂಚಿಸಲಾಗಿದೆ.
ಕುಂಞಿ ಅಹಮ್ಮದ್, ತಹಸೀಲ್ದಾರರು ಸುಳ್ಯ

ಪಂಚಾಯಿತಿ ಉದ್ಯೋಗಿಗಳ ವಾಸಸ್ಥಳದ ಕಟ್ಟಡ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಸ್ಥಳಾಂತರದ ಪ್ರಸ್ತಾವ ಬಂದಿದೆ. ಪಂಚಾಯಿತಿ ನಿರ್ಣಯ ಮಾಡಿ ಈ ತಿಂಗಳಾಂತ್ಯಕ್ಕೆ ಪ್ರಕ್ರಿಯೆ ನಡೆಸಲಾಗುವುದು.
ಶಕುಂತಳಾ ನಾಗರಾಜ್, ಬೆಳ್ಳಾರೆ ಗ್ರಾಪಂ ಅಧ್ಯಕ್ಷೆ

ಕಟ್ಟಡ ಹಾಗೂ ಕಚೇರಿಗೆ ಸಾಗುವ ದಾರಿಯೂ ಶಿಥಿಲವಾಗಿದೆ. ನಮ್ಮ ಕೆಲಸಗಳಿಗೆ ಕಚೇರಿಗೆ ಹೋಗುವುದೆ ದೊಡ್ಡ ಸಾಹಸವಾಗಿದೆ. ರಸ್ತೆ ಬದಿಯಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಜನರಿಗೆ ಅನುಕೂಲವಾಗುತ್ತದೆ.
ಪ್ರೇಮಚಂದ್ರ ಬೆಳ್ಳಾರೆ, ಗ್ರಾಮಸ್ಥ

Leave a Reply

Your email address will not be published. Required fields are marked *