ಸಂತೆ ಮೇಳದಲ್ಲಿ ಮಕ್ಕಳ ಉತ್ಸಾಹ

ಬಾಲಚಂದ್ರ ಕೋಟೆ ಬೆಳ್ಳಾರೆ
ಗ್ರಾಮೀಣ ಶಾಲೆಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡುತ್ತವೆ. ಸ್ಪರ್ಧೆ, ಕ್ರೀಡೆ, ಕಲಿಕೆಯಲ್ಲಿ ಹಳ್ಳಿ ಶಾಲೆಗಳು ಸದಾ ಮುಂದು. ಜೀವನಾಧಾರಿತ ಕಲಿಕೆಯ ಅಂಶಗಳನ್ನು ಗ್ರಾಮೀಣ ಭಾಗದ ಶಾಲೆಗಳ ಮಕ್ಕಳು ಬಹು ಬೇಗನೆ ಪಡೆಯುತ್ತಾರೆ ಎಂಬುದಕ್ಕೆ ಬಾಳಿಲ ವಿದ್ಯಾಬೋಧಿನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಮಕ್ಕಳ ಸಂತೆ ಮೇಳವೇ ಸಾಕ್ಷಿ.

ಗುರುವಾರ ಸಂಪೂರ್ಣ ದಿನ ಮಕ್ಕಳಿಗೆ ವ್ಯವಹಾರದ ಕಲಿಕಾ ದಿನವಾಗಿತ್ತು. ಉರಿ ಬಿಸಿಲಿನಲ್ಲೂ ಎಳೆಯ ಮಕ್ಕಳು ಉತ್ಸಾಹದಿಂದ ತಾವೇ ತಯಾರು ಮಾಡಿದ ತಿನಿಸುಗಳು, ವಸ್ತುಗಳು ಮತ್ತು ತರಕಾರಿಗಳನ್ನು ವಾರದ ಸಂತೆ ವ್ಯಾಪಾರಿಗಳ ಶೈಲಿಯಲ್ಲಿ ಮಾರುತ್ತಿದ್ದದ್ದು ವೃತ್ತಿಪರ ವಾಪಾರಸ್ಥರನ್ನೆ ನಾಚುವಂತಿದ್ದವು.
ಎಳೆಯ ಮಕ್ಕಳ ಬಾಯಿ ಚಾಲಾಕುತನ, ವ್ಯಾಪಾರ ಶೈಲಿ, ತೊಡಗಿಸಿಕೊಳ್ಳುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇವೆಲ್ಲದಕ್ಕೂ ಬೆಂಬಲವಾಗಿ ಶಾಲಾ ಶಿಕ್ಷಕ ವೃಂದದವರ ಮಾರ್ಗದರ್ಶನ ಬಾಲ ವ್ಯಾಪಾರಿಗಳ ಹುರುಪನ್ನು ಹೆಚ್ಚಿಸುತ್ತಿದ್ದದ್ದು ಸುಳ್ಳಲ್ಲ. ಕಾಣಿಯೂರು ಹಾಗೂ ಬಾಳಿಲ ಹೈಸ್ಕೂಲ್ ವಿದ್ಯಾರ್ಥಿಗಳು, ಹೆತ್ತವರು, ಎಸ್‌ಡಿಎಂಸಿ ಸದಸ್ಯರು ಮತ್ತು ಸಮಸ್ತ ಊರವರು ಸಂತೆ ಮೇಳದ ಗಿರಾಕಿಗಳಾಗಿದ್ದರು.

ಮಕ್ಕಳ ಸಂತೆಯ ವಿಶೇಷ: ಮಕ್ಕಳ ಸಂತೆ ಮೇಳವೇ ಒಂದು ವಿಶೇಷ. ಆ ಸಂತೆ ಮೇಳದಲ್ಲೂ ಹಲವಾರು ಸೋಜಿಗದ ವಿಶೇಷಗಳು ಕಂಡುಬಂತು. ಮಕ್ಕಳ ಸಂತೆಯಲ್ಲಿ ಸ್ವತಃ ಅವರೇ ತಯಾರಿಸಿದ ತಿನಿಸುಗಳು, ಮನೆಯಲ್ಲಿ ಬೆಳೆದ ತಾಜಾ ತರಕಾರಿಗಳು, ಕರಕುಶಲ ವಸ್ತುಗಳು ಮಾರಾಟಕ್ಕಿದ್ದು ವಿಶೇಷವಾಗಿತ್ತು. ಪುಟ್ಟ ಕೈಗಳಿಂದ ಸಿದ್ಧಪಡಿಸಿದ ತೆಂಗಿನ ಗರಿಯ ಹಿಡಿಸೂಡಿ, ವೀಳ್ಯದ ಎಲೆಯ ಕಟ್ಟುಗಳಿಗೆ, ಭಾರಿ ಬೇಡಿಕೆ ಬಂತು. ಸಂತೆಯಲ್ಲಿ 22 ಮಳಿಗೆಗಳಿದ್ದು, 120ಕ್ಕಿಂತ ಅಧಿಕ ವಿದ್ಯಾರ್ಥಿ ವ್ಯಾಪಾರಿಗಳು ಭಾಗವಹಿಸಿದ್ದರು.

ಹೀಗಿತ್ತು ಮಕ್ಕಳ ವ್ಯಾಪಾರ: ಮಕ್ಕಳ ಸಂತೆ ಮೇಳದಲ್ಲಿ ಬಹಳ ಅಗ್ಗದ ಬೆಲೆಗೆ ಮನೆನಿರ್ಮಿತ ದಿನಬಳಕೆಯ ವಸ್ತುಗಳು, ತರಕಾರಿಗಳು ಹಾಗೂ ತಿನಿಸುಗಳು ಮಾರಾಟವಾಗುತ್ತಿದ್ದವು. ಊರ ಜನರು ಕೂಡ ಮುಗಿಬಿದ್ದು ಖರೀದಿಯಲ್ಲಿ ತೊಡಗಿದರು. ಎಲ್ಲ ವಸ್ತುಗಳಿಗೂ ಪುಟ್ಟ ಮಕ್ಕಳೇ ದರ ನಿಗದಿಪಡಿಸಿದ್ದು ಗ್ರಾಹಕರನ್ನು ಆಶ್ಚರ್ಯಗೊಳಿಸಿತ್ತು. ಕೆ.ಜಿ, ಗ್ಲಾಸುಗಳ ಅಳತೆ ಮೂಲಕ ದರ ನಿಗದಿಪಡಿಸಲಾಗಿತ್ತು. ತೊಂಡೆ ಕೆಜಿಗೆ 15 ರೂ., ಹಲಸು 20 ರೂ, ನುಗ್ಗೆ 15 ರೂ., ಹುಳಿ 20 ರೂ., ಬದನೆ 15 ರೂ., ಕಲ್ಲಂಗಡಿ ತುಂಡು 10 ರೂ, ತಿಮರೆ(ಒಂದಲಗ) 5 ರೂ, ಬಸಳೆ ಕಟ್ಟು 20 ರೂ, ಹಪ್ಪಳ 50 ರೂ, ಫ್ರುಟ್ ಸಲಾಡ್ 5 ರೂ, ಬಾಳೆಕಾಯಿ ಬಜ್ಜಿ 5 ರೂ, ಕಂಚುಳಿ ಗಿಡ 40 ರೂ., ಕೆಂಪು ಕುಂದ್ರಿ ತೆಂಗಿನ ಗಿಡ 50 ರೂ, ಚರುಮುರಿ 10 ರೂಪಾಯಿಗಳಂತೆ ದೊರೆಯುತ್ತಿದ್ದವು.

ಇಂದಿನ ಮಕ್ಕಳು ಕೇವಲ ಮೊಬೈಲ್, ಟಿ.ವಿ, ವೀಕೆಂಡ್ ತಿರುಗಾಟ ಎಂದು ಸಮಯ ವ್ಯರ್ಥ ಮಾಡುವ ಬದಲು ಇಂಥ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಮಕ್ಕಳಿಗೆ ಹಣ ಸಂಪಾದನೆಯ ಕಷ್ಟ ಅರಿವಾಗುತ್ತದೆ.
|ಸಯ್ಯದ್, ಗ್ರಾಹಕ

ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗಿರದೆ ಜೀವನದ ಪಾಠವನ್ನು ಕಲಿಯುತ್ತಿರಬೇಕು. ಅದನ್ನು ಶಾಲೆಗಳಲ್ಲಿ ಕಲಿಸುವುದಿಲ್ಲ. ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಗೊತ್ತಾಗುತ್ತದೆ.
|ಸುಬ್ಬಯ್ಯ ವೈ.ಬಿ, ಶಾಲಾ ಮುಖ್ಯ ಶಿಕ್ಷಕರು

ನಮಗೆ ಕೊಂಚವಾದರೂ ವ್ಯವಹಾರದ ಜ್ಞ್ಞಾನ ದೊರೆತಿದ್ದು ಇಂಥ ಮಕ್ಕಳ ಸಂತೆ ಮೇಳದಿಂದ. ಪ್ರತಿ ವರ್ಷವೂ ಕೂಡ ಮಕ್ಕಳ ಸಂತೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೇನೆ.
|ಕೀರ್ತನ್, 6ನೇ ತರಗತಿ ವಿದ್ಯಾರ್ಥಿ