ಎನ್​ಜಿಟಿ ಆದೇಶದ ವಿರುದ್ಧ ಕಾಯ್ದೆ ಅಸ್ತ್ರ?

ಬೆಳಗಾವಿ: ಬಿಬಿಎಂಪಿಯ ಬಫರ್ ಜೋನ್ ಹಾಗೂ ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ತೀರ್ಪಿನ ವಿರುದ್ಧ ಕಾಯ್ದೆಯ ಅಸ್ತ್ರ ಬಳಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಬೆಂಗಳೂರಿನ ಸಚಿವರು, ಶಾಸಕರು ಹಾಗೂ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ ಜತೆ ಸುದೀರ್ಘ ಚರ್ಚೆ ನಡೆಸಿದರು.

ಎನ್​ಜಿಟಿ ನೀಡಿರುವ ಆದೇಶದ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪೊನ್ನಣ್ಣ ಮೂರು ಅಭಿಪ್ರಾಯಗಳನ್ನು ಸಭೆಯ ಮುಂದಿಟ್ಟರು.

1. ಹೊಸ ಕಾಯ್ದೆಯನ್ನೇ ರಚನೆ ಮಾಡಿ ಆ ಮೂಲಕ ಎನ್​ಜಿಟಿ ಆದೇಶ ಜಾರಿಯಾಗದಂತೆ ತಡೆಯವುದು.

2. ಎನ್​ಜಿಟಿ ಮುಂದೆ ಮೇಲ್ಮನವಿ ಸಲ್ಲಿಸುವ ಮೂಲಕ ಬಫರ್ ಜೋನ್ ಇಡೀ ದೇಶಕ್ಕೆ ಒಂದೇ ರೀತಿಯಲ್ಲಿರುವಂತೆ ಆದೇಶ ನೀಡುವಂತೆ ಮನವಿ ಮಾಡುವುದು. ಏಕೆಂದರೆ ಮುಂಬೈನಲ್ಲಿ ಬಫರ್ ಜೋನ್ ನಗರದೊಳಗೆ 4.5 ಮೀಟರ್, ನಗರದ ಹೊರಗೆ 9 ಮೀಟರ್ ಇದೆ. ಬೇರೆ ಬೇರೆ ನಗರಗಳಲ್ಲಿ ಬೇರೆ ಬೇರೆ ವ್ಯಾಪ್ತಿ ನಿಗದಿ ಮಾಡಲಾಗಿದೆ. ಆದರೆ ಬೆಂಗಳೂರಿಗೆ ಸಂಬಂಸಿದಂತೆ 75 ಮೀಟರ್ ನಿಗದಿ ಮಾಡಿ ಆದೇಶ ನೀಡಲಾಗಿದೆ. ಇದರಿಂದ 75 ಮೀಟರ್ ವ್ಯಾಪ್ತಿಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡಬೇಕಾದ ಸ್ಥಿತಿ ನಿರ್ವಣವಾಗಿದೆ. ಆದ್ದರಿಂದ ಎನ್​ಜಿಟಿ ಮುಂದೆಯೇ ಮೇಲ್ಮನವಿ ಸಲ್ಲಿಸಬಹುದು.

3. ಎನ್​ಜಿಟಿ ಆದೇಶ ರದ್ದು ಮಾಡುವಂತೆ ಸುಪ್ರೀಂಕೋರ್ಟ್​ನಲ್ಲಿ ಮನವಿ ಮಾಡುವುದು.

ಈ ಮೂರು ಅಭಿಪ್ರಾಯಗಳ ಕುರಿತು ಚರ್ಚೆ ನಡೆಸಲಾಗಿದೆ. ಆದರೆ ಕಾಯ್ದೆ ರೂಪಿಸುವ ಬಗ್ಗೆಯೇ ಹೆಚ್ಚಿನ ಒಲವು ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೂ ಅಡ್ವೊಕೇಟ್ ಜನರಲ್ ಅವರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಿ ಸೋಮವಾರದೊಳಗೆ ತಿಳಿಸುವಂತೆ ಪೊನ್ನಣ್ಣ ಅವರಿಗೆ ಸೂಚಿಸಲಾಗಿದೆ.

ಕಾಯ್ದೆ ರೂಪಿಸುವ ಬಗ್ಗೆ ಅಡ್ವೊಕೇಟ್ ಜನರಲ್ ಒಪ್ಪಿಗೆ ನೀಡಿದರೆ ಇದೇ ಅಧಿವೇಶನದಲ್ಲಿಯೇ ಕಾಯ್ದೆಯನ್ನು ತರುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಎನ್​ಜಿಟಿ ಬಿಬಿಎಂಪಿಗೆ ದಂಡ ವಿಧಿಸಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ವಿಶೇಷ ಜಿಲ್ಲಾಧಿಕಾರಿ ಅಮಾನತಿಗೆ ಸ್ಪೀಕರ್ ರಮೇಶ್​ಕುಮಾರ್ ಸಲಹೆ

ಬೆಳಗಾವಿ: ಬೆಂಗಳೂರಿನ ಬಿ.ಎಂ. ಕಾವಲು ವ್ಯಾಪ್ತಿಯ 310 ಎಕರೆ ಸರ್ಕಾರಿ ಭೂಮಿಯನ್ನು ನಿಯಮ ಮೀರಿ ಪರಭಾರೆ ಮಾಡಲು ಅವಕಾಶ ಮಾಡಿಕೊಟ್ಟ ಅಂದಿನ ವಿಶೇಷ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕೆಂಬ ಕುರಿತು ಸದನದಲ್ಲಿ ಚರ್ಚೆಯಾಯಿತು.

ಶೂನ್ಯವೇಳೆಯಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ವಿಷಯ ಪ್ರಸ್ತಾಪಿಸಿದರು. 3 ಸಾವಿರ ಕೋಟಿ ರೂ. ಬೆಲೆಯ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆಗೆ ಮಂಜೂರಾತಿ ನೀಡಲಾಗಿದೆ. ಅಂದಿನ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ರಂಗಪ್ಪ ಎಂಬುವರ ಹಿತಾಸಕ್ತಿ ಈ ಪ್ರಕರಣದಲ್ಲಿ ಎದ್ದು ಕಾಣುತ್ತದೆ. ಇಂಥ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಸರ್ಕಾರ ಮೌನ ವಹಿಸಿರುವುದು ಒಳ್ಳೆಯದಲ್ಲ ಎಂದರು. ರಾಮಸ್ವಾಮಿಯವರ ಮಾತನ್ನು ಆಸಕ್ತಿಯಿಂದ ಆಲಿಸಿದ ಸ್ಪೀಕರ್ ರಮೇಶ್​ಕುಮಾರ್, ಮಧ್ಯ ಪ್ರವೇಶಿಸಿ ಇಂಥ ಅಧಿಕಾರಿಗೆ ಶಿಕ್ಷೆಯಾಗಬೇಡವೇ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ತಪ್ಪುಗಳಾಗಿರುವುದು ಕಂಡುಬಂದಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಒಪ್ಪಿಕೊಂಡರು.

ಸಚಿವರ ಮಾತನ್ನು ಖಾತ್ರಿ ಪಡಿಸಿಕೊಂಡ ಸ್ಪೀಕರ್, ಇಷ್ಟು ದೊಡ್ಡ ತಪ್ಪೆಸಗಿರುವ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ಸಾಕೆ ಎಂದು ಪ್ರಶ್ನಿಸಿದರಲ್ಲದೆ, ಸಂಜೆಯೊಳಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. ಸ್ಪೀಕರ್ ಮಾತಿನಿಂದ ಸಚಿವರು ಗಲಿಬಿಲಿಗೊಂಡರು. ದೇಶಪಾಂಡೆ ನೆರವಿಗೆ ಧಾವಿಸಿದ ಸಚಿವ ಡಿ.ಕೆ.ಶಿವಕುಮಾರ್, ಪೀಠದಿಂದ ನಿರ್ದೇಶನ ಮಾಡುವುದಕ್ಕಿಂತ ನಾವೇ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಅವಕಾಶ ಕೊಡಿ ಎಂದು ಕೋರಿದರು.

ಹೇಮಾವತಿಗಾಗಿ ಶಾಸಕರ ಫೈಟ್

ಬೆಳಗಾವಿ: ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬಿಡುಗಡೆಗೆ ಹಿಂದೇಟು ಹಾಕುತ್ತಿರುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಯಿತು. ಇದೇ ವಿಚಾರದಲ್ಲಿ ತುಮಕೂರು ಮತ್ತು ಹಾಸನ ಶಾಸಕರ ಜಟಾಪಟಿ ನಡೆಯಿತು.

ಶೂನ್ಯವೇಳೆಯಲ್ಲಿ ತುಮಕೂರು ಜಿಲ್ಲೆ ನೀರಿನ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪವಾಯಿತು.ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿಯವರಿಗೆ ಬೆಂಬಲವಾಗಿ ನಿಂತ ತುಮಕೂರು ಶಾಸಕ ಜ್ಯೋತಿ ಗಣೇಶ್ ಮತ್ತಿತರರು ಏರಿದ ದನಿಯಲ್ಲಿ ಮುಗಿಬಿದ್ದರು. ಹಾಸನ ರಾಜಕಾರಣಿಗಳಿಂದ ನಮಗೆ ನೀರು ಸಿಗುತ್ತಿಲ್ಲ ಎಂದು ಟೀಕಿಸಿದರು. ನೀರು ಬೇಕಿದ್ದರೆ ಕಾನೂನು ಪ್ರಕಾರ ಬಿಡಿಸಿಕೊಳ್ಳಿ, ನಮ್ಮನ್ನೇಕೆ ಹೀಗಳೆಯುತ್ತೀರಿ ಎಂದು ಹಾಸನ ಭಾಗದ ಆಡಳಿತ ಪಕ್ಷದ ಶಾಸಕರು ತಿರುಗೇಟು ನೀಡಿದರು.

ಪ್ರತಿಪಕ್ಷ ನಾಯಕ ಯಡಿಯೂರಪ್ಪ ದನಿಗೂಡಿಸಿ, ನೀರಿನ ವಿಚಾರದಲ್ಲಿ ತಾರತಮ್ಯ ಆಗಬಾರದು. ರಾಜಕಾರಣ ಮಾಡಬಾರದು, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಹೇಮಾವತಿ ನದಿಯಿಂದ 4 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿತ್ತು, ಕಳೆದ ನಾಲ್ಕು ದಿನಗಳಿಂದ ನೀರು ನಿಲ್ಲಿಸಲಾಗಿದೆ. ಹೀಗಾಗಿ ಅನೇಕ ಭಾಗಗಳಿಗೆ ಕುಡಿಯುವ ನೀರಿನ ತತ್ವಾರ ಉಂಟಾಗಿದೆ ಎಂದು ಮಾಧುಸ್ವಾಮಿ ಹಾಗೂ ಜ್ಯೋತಿ ಗಣೇಶ್ ವಾದಿಸಿದರು.

ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಯಾರಿಗೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ, ಯಾವುದೇ ಆತಂಕ ಬೇಡ. ಸಮಸ್ಯೆ ಏನೆಂದು ಸಮಗ್ರವಾಗಿ ತಿಳಿದುಕೊಂಡು ಪರಿಹಾರ ಮಾಡಲಾಗುತ್ತದೆ. ಯಡಿಯೂರಪ್ಪ ನನ್ನನ್ನು ಭೇಟಿ ಮಾಡಿದ ಸಂದರ್ಭ ತುಮಕೂರು ಭಾಗದ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ಚರ್ಚೆಗೆ ತೆರೆ ಎಳೆದರು.

ಸರ್ಕಾರಕ್ಕೆ 75 ಕೋಟಿ ರೂ. ದಂಡ