ಬೆಲ್ ಬಾಟಂಗೆ ಹರಿಕಥೆ ಸ್ಪರ್ಶ

ಬೆಂಗಳೂರು: ಆರಂಭದಿಂದಲೂ ಭಾರಿ ನಿರೀಕ್ಷೆ ಸೃಷ್ಟಿಸಿದ್ದ ‘ಬೆಲ್ ಬಾಟಂ’ ಚಿತ್ರ ಈಗ ಬಿಡುಗಡೆಗೆ ಹತ್ತಿರವಾಗುತ್ತಿದೆ. ಜನವರಿಯಲ್ಲೇ ಸಿನಿಮಾ ತೆರೆಕಾಣಿಸುವ ಆಲೋಚನೆಯಲ್ಲಿದ್ದಾರೆ ನಿರ್ವಪಕ ಸಂತೋಷ್ ಕುಮಾರ್. ಇತ್ತೀಚೆಗೆ ಹೊರಬಂದ ‘ಏತಕೆ..’ ಹಾಡು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈಗಿನದ್ದು ಟ್ರೇಲರ್ ಸರದಿ. ತುಂಬ ಡಿಫರೆಂಟ್ ಆಗಿ ಮೂಡಿಬಂದಿರುವ ಟ್ರೇಲರನ್ನು ಬುಧವಾರ ಲಾಂಚ್ ಮಾಡಲಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣ; ಕಣ್ಣು ಕುಕ್ಕುವ ರೆಟ್ರೊ ರಂಗು! ಹೌದು, ಈ ಮೊದಲೇ ಹೇಳಿದಂತೆ 80ರ ದಶಕದ ಹಿನ್ನೆಲೆಯಲ್ಲಿ ‘ಬೆಲ್ ಬಾಟಂ’ ಕಥೆ ಸಾಗಲಿದೆ. ಅದಕ್ಕೆ ತಕ್ಕಂತೆಯೇ ಪೋಸ್ಟರ್​ಗಳನ್ನು ವಿನ್ಯಾಸಗೊಳಿಸಿ ಹರಿಬಿಟ್ಟಿದ್ದರು ನಿರ್ದೇಶಕ ಜಯತೀರ್ಥ. ಈಗ ಟ್ರೇಲರ್​ನಲ್ಲಿ ಪಕ್ಕಾ ರೆಟ್ರೊ ಸೊಗಡು ತುಂಬಿ ಕಳುಹಿಸಿದ್ದಾರೆ. ಆಗಿನ ಕಾಲದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಹರಿಕಥೆ ಮಾದರಿಯಲ್ಲಿ ‘ಬೆಲ್ ಬಾಟಂ’ ಚಿತ್ರದ ಝುಲಕ್ ತೋರಿಸಿರುವುದು ವಿಶೇಷ. ಕಥಾನಾಯಕ ಡಿಟೆಕ್ಟೀವ್ ದಿವಾಕರನ ಪಾತ್ರ ಹೇಗಿದೆ? ಕಥೆಯ ಎಳೆ ಏನು ಎಂಬಿತ್ಯಾದಿ ಅಂಶಗಳನ್ನು ಹರಿಕಥೆಯ ಮೂಲಕವೇ ವಿವರಿಸಿರುವುದು ಎಲ್ಲರ ಗಮನ ಸೆಳೆಯುವಂತಿದೆ. ದಶಕಗಳ ಹಿಂದಿನ ಫೀಲ್ ಕಟ್ಟಿಕೊಡಲು ಹರಿಕಥೆ ಜತೆಗೆ ನಿರ್ದೇಶಕರು ಇನ್ನೂ ಹಲವು ಬಗೆಯಲ್ಲಿ ಪ್ರಯತ್ನಿಸಿದ್ದಾರೆ. ಪತ್ತೇದಾರಿ ಶೈಲಿಯಲ್ಲಿ ಬಂದ ಡಾ. ರಾಜ್​ಕುಮಾರ್ ಸಿನಿಮಾಗಳ ಚಿತ್ರಿಕೆಗಳು, ಆಕಾಶವಾಣಿ ವಾರ್ತಾಪ್ರಸಾರದ ತುಣುಕುಗಳು, ಆ ದಿನಗಳನ್ನು ನೆನಪಿಸುವಂಥ ಲೊಕೇಷನ್​ಗಳು.. ಹೀಗೆ ಅನೇಕ ಅಂಶಗಳ ಮೂಲಕ ಚಿತ್ರದ ಮೆರುಗು ಹೆಚ್ಚಿಸುವ ಕೆಲಸ ಮಾಡಲಾಗಿದೆ. ಕಾಮಿಡಿ, ಲವ್​ಸ್ಟೋರಿ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳು ಬೆರೆತಿರುವ ‘ಬೆಲ್ ಬಾಟಂ’ನಲ್ಲಿ ಹಾಸ್ಯಕ್ಕೆ ಹೆಚ್ಚು ಸ್ಪೇಸ್ ಸಿಕ್ಕಂತಿದೆ. ಟ್ರೇಲರ್​ನಲ್ಲಿ ಕಾಣಿಸುವ ಪ್ರತಿ ದೃಶ್ಯ ಮತ್ತು ಡೈಲಾಗ್ ನೋಡುಗರಲ್ಲಿ ನಗು ಉಕ್ಕಿಸುವಂತಿವೆ. ಸಾಮಾನ್ಯ ಪೊಲೀಸ್ ಪೇದೆಯೊಬ್ಬ ಪತ್ತೇದಾರಿಯ ವೇಷ ಧರಿಸಿಕೊಂಡು ಒಂದು ಕೊಲೆ ಪ್ರಕರಣವನ್ನು ಹೇಗೆ ಭೇದಿಸುತ್ತಾನೆ ಎಂಬ ಎಳೆಯನ್ನೇ ಇಟ್ಟುಕೊಂಡು ತಯಾರಾಗಿರುವ ಈ ಚಿತ್ರದಲ್ಲಿ ರಿಷಬ್​ಗೆ ಜೋಡಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲೂ ಹಲವು ಜನಪ್ರಿಯ ಕಲಾವಿದರಿದ್ದಾರೆ. ರಿಷಬ್ ತಂದೆ ಪಾತ್ರದಲ್ಲಿ ಅಚ್ಯುತ್ ಕುಮಾರ್ ಬಣ್ಣ ಹಚ್ಚಿದ್ದಾರೆ. ಉಳಿದಂತೆ ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಶಿವಮಣಿಗೆ ಡಿಫರೆಂಟ್ ಪೋಷಾಕು ನೀಡಲಾಗಿದೆ.