ಜೈಶ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಕುರಿತ ಚರ್ಚೆಗಳು ಶೀಘ್ರದಲ್ಲೇ ಬಗೆಹರಿಯಲಿವೆ: ಚೀನಾ ರಾಯಭಾರಿ

ನವದೆಹಲಿ: ಜೈಶ್​ ಎ ಮೊಹಮ್ಮದ್ ಭಯೋತ್ಪಾದನೆ ಸಂಘಟನೆಯ ಪ್ರಮುಖ ಉಗ್ರ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸುವ ವಿಷಯದಲ್ಲಿ ಎದ್ದಿರುವ ಚರ್ಚೆಗಳು ಶೀಘ್ರದಲ್ಲೇ ಬಗೆಹರಿಯಲಿವೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಲ್ಯು ಝಾಹುಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಸೂದ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ನಿರ್ಣಯದ ವಿರುದ್ಧ ವಿಟೋ ಅಧಿಕಾರ ಬಳಸಿದ ಕೆಲದಿನಗಳ ಬಳಿಕ ಚೀನಾ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೂದ್​ ಅಜರ್​ನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಪಟ್ಟಿಯಲ್ಲಿ ಇರಿಸುವ ವಿಷಯವಾಗಿ ಕೆಲ ತಾಂತ್ರಿಕ ಸಮಸ್ಯೆಗಳಿವೆ. ಮಾತುಕತೆ ಮೂಲಕ ಇವನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಈ ವಿಷಯ ಶೀಘ್ರದಲ್ಲೇ ಪರಿಹಾರವಾಗಲಿದೆ. ನನ್ನನ್ನು ನಂಬಿ ಎಂದು ಲ್ಯು ಝಾಹುಯಿ ಹೇಳಿದರು.

ಕಳೆದ ಗುರುವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಅಮೆರಿಕ, ಫ್ರಾನ್ಸ್​ ಮತ್ತಿತರ ರಾಷ್ಟ್ರಗಳು ಪ್ರಸ್ತಾವನೆ ಇರಿಸಿದ್ದವು. ತನ್ನ ವಿಟೋ ಅಧಿಕಾರ ಬಳಸಿದ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯ ಎಲ್ಲ ಸದಸ್ಯರೂ ಭಾರತದ ಪರ ನಿಂತು, ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದವು. (ಏಜೆನ್ಸೀಸ್​)