ಮತಜಾಗೃತಿಗೆ ಕೆಲಸ ಮಾಡಿದರೆ ಸನ್ಮಾನ

ತೆಲಸಂಗ: ಶೇ.100ರಷ್ಟು ಮತದಾನ ಗುರಿ ತಲುಪಲು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ತಾಲೂಕು ಆಡಳಿತದಿಂದ ಗೌರವಿಸಲಾಗುವುದು ಎಂದು ತಾಪಂ ಇಒ ರವಿ ಬಂಗಾರೆಪ್ಪನವರ ಹೇಳಿದ್ದಾರೆ.

ಗ್ರಾಮದ ಮುಖ್ಯ ಬಜಾರ್‌ದಲ್ಲಿ ಮಂಗಳವಾರ ಸಂತೆ ದಿನ ಲೋಕಸಭೆ ಚುನಾವಣೆ ನಿಮಿತ್ತ ಮತದಾನ ಜಾಗೃತಿ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಮತದಾನ ಜಾಗೃತಿಯಲ್ಲಿ ಸ್ವಯಂ ತೊಡಗಿಸಿಕೊಂಡ ರೈತರು, ಯುವಕ-ಯುವತಿಯರು, ವಿವಿಧ ಸಂಘಟನೆಯ ಕಾರ್ಯಕರ್ತರನ್ನು ಗೌರವಿಸುವ ಜತೆಗೆ ಜಿಲ್ಲಾ ಮಟ್ಟದ ಯುವ ಪ್ರಶಸ್ತಿಗೆ ಹೆಸರು ಸೂಚಿಸಲಾಗುತ್ತದೆ. ಮತದಾನದಿಂದ ಯಾರೊಬ್ಬರೂ ದೂರು ಉಳಿಯಬಾರದು. ಇದನ್ನು ಮನವರಿಕೆ ಮಾಡುವ ಕೆಲಸ ಆಗಬೇಕು ಎಂದರು.

ಸೆಕ್ಟರ್ ಅಧಿಕಾರಿ ಪಿ.ಕೆ.ಜೊಂಗಣ್ಣವರ, ಎಸ್.ಎಲ್.ಕುಡ್ಡಣ್ಣವರ, ಪಿಡಿಒ ಬೀರಪ್ಪ ಕಡಗಂಚಿ, ಗ್ರಾಮ ಲೆಕ್ಕಾಧಿಕಾರಿ ಮೃತ್ಯುಂಜಯ ಮಾಳಿ, ಕಾರ್ಯದರ್ಶಿ ಆರ್.ಎಸ್.ಹಿರೇಮಠ, ಮಂಜುನಾಥ ಮೊಕಾಶಿ, ಅಪ್ಪಾಸಾಬ ಮದಬಾವಿ, ಶಿಕ್ಷಕರು, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.