ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರ ಆತ್ಮಹತ್ಯೆ

ಹಿರೇಬಾಗೇವಾಡಿ: ಗ್ರಾಮದ ಕುಂಬಾರ ಓಣಿಯಲ್ಲಿ ಶುಕ್ರವಾರ ಮಧ್ಯಾಹ್ನ ಯುವ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈರಣ್ಣ ಗೋಪಾಲ ಸಾಲಿಮನಿ (24), ಶ್ವೇತಾ ಶಂಕರ ಕುಂಬಾರ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಮಧ್ಯಾಹ್ನ ಯಾರೂ ಇಲ್ಲದ ವೇಳೆ ಈರಣ್ಣನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಲ್ಲಮ್ಮನ ಗುಡ್ಡಕ್ಕೆ ಹೋಗಿದ್ದ ಈರಣ್ಣನ ತಾಯಿ ಫಕೀರವ್ವ ಮಧ್ಯಾಹ್ನ ಮರಳಿ ಬಂದು ಬಾಗಿಲು ತೆರೆಯಲೆತ್ನಿಸಿದಾಗ ಒಳಗಡೆಯಿಂದ ಚಿಲಕ ಹಾಕಿತ್ತು. ಕಿಟಕಿಯಿಂದ ಇಣುಕಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈರಣ್ಣ ಬೆಳಗಾವಿಯ ಆಸ್ಪತ್ರೆಯಲ್ಲಿ ಲಿಫ್ಟ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಶ್ವೇತಾ ಪದವಿ ವ್ಯಾಸಂಗಕ್ಕಾಗಿ ನಿತ್ಯ ಬೆಳಗಾವಿ ಕಾಲೇಜಿಗೆ ಹೋಗುತ್ತಿದ್ದಳು. ಅವರಿಬ್ಬರ ಪ್ರೇಮದ ಬಗ್ಗೆ ಮನೆಯಲ್ಲಾಗಲಿ ಅಥವಾ ಓಣಿಯಲ್ಲಾಗಲಿ ಯಾರಿಗೂ ಗೊತ್ತಿಲ್ಲ ಎನ್ನಲಾಗುತ್ತಿದೆ.

ಮಗನ ಅಗಲಿಕೆಯಿಂದ ರೋದಿಸುತ್ತಿರುವ ಈರಣ್ಣನ ತಾಯಿ ಫಕ್ಕೀರವ್ವ.

ನಾವೇ ನಿಂತು ಮದುವೆ ಮಾಡುತ್ತಿದ್ದೆವು: ಪ್ರೀತಿಸಿದಾಕೆಯನ್ನೇ ಮದುವೆ ಆಗುವುದಾಗಿ ಹೇಳಿದ್ದರೆ ಆಕೆಯೊಂದಿಗೇ ಲಗ್ನ ಮಾಡುತ್ತಿದ್ದೆವು. ಆತ್ಮಹತ್ಯೆ ಮಾಡಿಕೊಂಡು ನಮಗೆ ಸಂಕಷ್ಟ ತಂದಿಟ್ಟ ಎಂದು ಈರಣ್ಣನ ತಾಯಿ ಫಕ್ಕೀರವ್ವ ಕಣ್ಣೀರಿಡುತ್ತ ಗೋಗರೆದರು.

ಶ್ವೇತಾಳ ತಂದೆ ಶಂಕರ ಕುಂಬಾರ ಮೃತಪಟ್ಟಿದ್ದು, ಆಕೆ ತನ್ನ ತಾಯಿಯೊಂದಿಗೆ ಅಜ್ಜನ ಮನೆಯಲ್ಲಿದ್ದಳು. ಈರಣ್ಣನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರೆ ಖಂಡಿತ ಇಬ್ಬರ ಲಗ್ನಕ್ಕೆ ಸಮ್ಮತಿಸುತ್ತಿದ್ದೆವು. ಅದರಲ್ಲೂ ಈರಣ್ಣ ನಮ್ಮ ಕುಲದವನೇ ಆಗಿದ್ದ. ಅವಸರ ಮಾಡಿ ಪ್ರಾಣಹಾನಿ ಮಾಡಿಕೊಂಡರು ಎಂದು ಶ್ವೇತಾಳ ಅಜ್ಜ ಅಡಿವೆಪ್ಪ ಘೋಡಗೇರಿ ತಿಳಿಸಿದರು.

ಸುದ್ದಿ ತಿಳಿದು ಜನಸಾಗರವೇ ಕುಂಬಾರ ಓಣಿಗೆ ಹರಿದು ಬಂದಿತ್ತು. ಕಿಟಕಿಯಿಂದ ಮೃತದೇಹಗಳ ಫೋಟೋ ತೆಗೆಯುವವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಮೃತ ಪ್ರೇಮಿಗಳ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಿಪಿಐ ನಾರಾಯಣಸ್ವಾಮಿ, ಪಿಎಸ್‌ಐ ಪಠಾಣ, ಮುಖ್ಯಪೇದೆ ಸಯ್ಯದ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದರು.