ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆ ಕುಂಠಿತ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕಾರ್ಯವೈಖರಿ ಬಗ್ಗೆ ಸಹೋದರ ಹಾಗೂ ಶಾಸಕ ಸತೀಶ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಜಿಲ್ಲೆಗೆ ಹೆಚ್ಚಿನ ಅನುದಾನ ಬರುತ್ತಿಲ್ಲ. ಇಲ್ಲಿ ಅಭಿವೃದ್ಧಿ ಸಂಬಂಧದ ಸಭೆಗಳು ನಡೆಯುತ್ತಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಸುದ್ದಿಗಾರರು ರಮೇಶ ಜಾರಕಿಹೊಳಿ ಬೆನ್ನಿಗೆ ಬೀಳಬೇಕು. ಜಿಲ್ಲೆಯಲ್ಲಿ ಏಕೆ ಅಭಿವೃದ್ಧಿ ಆಗುತ್ತಿಲ್ಲ, ಏಕೆ ಸಭೆ ನಡೆಸುತ್ತಿಲ್ಲ ಎಂದು ಸಚಿವರನ್ನು ಪ್ರಶ್ನಿಸಬೇಕು. ಸರ್ಕಾರವೂ ಈ ಬಗ್ಗೆ ಪ್ರಶ್ನಿಸಬೇಕು. ಸಚಿವರೂ ನಿರ್ದೇಶನ ನೀಡಬೇಕು. ನಾನು ಈ ಬಗ್ಗೆ ಪ್ರಶ್ನಿಸಲು ಬರುವುದಿಲ್ಲ. ಶಾಸಕನಾಗಿ ನನಗೆ ನನ್ನದೆ ಇತಿ, ಮಿತಿ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಮಟ್ಕಾ, ಗಾಂಜಾ ಮಾರಾಟ ಪ್ರಕರಣ ಹೆಚ್ಚುತ್ತಿದೆ. ಅಧಿಕಾರಿಗಳು ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಅನುದಾನ ತರಲು ಪ್ರಯತ್ನಿಸಬೇಕು ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಜ್ಯೂಸ್ ಕುಡಿಸಿದರೆ ಲೀಡರ್ ಆಗಲ್ಲ: ಯಾರೋ ಹೊರ ಜಿಲ್ಲೆಯಿಂದ ಬಂದು ಪ್ರತಿಭಟನೆ ಮಾಡುವವರಿಗೆ ಜ್ಯೂಸ್ ಕುಡಿಸಿ ಹೋದರೆ ಲೀಡರ್ ಆಗಲು ಸಾಧ್ಯವಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರಗೆ ಟಾಂಗ್ ನೀಡಿದರು.

ಕಬ್ಬಿನ ದರ ಪಾವತಿಗೆ ಒತ್ತಾಯಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸುತ್ತಿದ್ದರು. ಕಾರ್ಯಕರ್ತರು ಆಹ್ವಾನಿಸಿದಾಗ ಸಚಿವ ಡಿ.ಕೆ.ಶಿವಕುಮಾರ ಅಲ್ಲಿ ಹೋಗಿ ಜ್ಯೂಸ್ ಕುಡಿಸಿದ್ದಾರೆ. ಅದು ಅವರ ಕರ್ತವ್ಯ. ನಾವೂ ಬೇರೆ ಜಿಲ್ಲೆಗೆ ಹೋದಾಗ ಈ ರೀತಿ ಮಾಡಿದ್ದೇವೆ ಎಂದರು.
ಸಚಿವ ಸ್ಥಾನ ಆಕಾಂಕ್ಷಿಯಲ್ಲ: ಸಂಪುಟ ವಿಸ್ತರಣೆ ವೇಳೆ ನಮ್ಮ ಜಿಲ್ಲೆಯಲ್ಲಿ ಬೇರೆ ಯಾರಿಗೂ ಸಚಿವ ಸ್ಥಾನ ಕೊಡುವ ಪ್ರಶ್ನೆಯೆ ಇಲ್ಲ. ಜಿಲ್ಲೆಗೆ ಎರಡು ಸಚಿವ ಸ್ಥಾನ ದೊರೆಯುವುದಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಎರಡು ವರ್ಷದ ನಂತರ ಸಚಿವ ಸ್ಥಾನವನ್ನು ನಾನು ಕೇಳುತ್ತೇನೆ ಎಂದು ಶಾಸಕ ಸತೀಶ ತಿಳಿಸಿದರು.

ಡಿಕೆಶಿ, ರಮೇಶ, ಹೆಬ್ಬಾಳ್ಕರ್ ಒಂದೇ ಪರಿವಾರ!

ಸಚಿವರಾದ ಡಿ.ಕೆ.ಶಿವಕುಮಾರ, ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ ಪರಿವಾರ. ಕಳೆದ 20 ವರ್ಷಗಳಿಂದ ಅವರು ಒಂದು ಪರಿವಾರದ ಹಾಗೆ ಕೂಡಿಕೊಂಡು ಇದ್ದಾರೆ. ನಾನೇ ಹೊಸಬ. ಅವರ ಮಧ್ಯೆ ಒಡಕು ಉಂಟು ಮಾಡಲು ನಾನು ಪ್ರಯತ್ನಿಸಿಲ್ಲ. ಅವರ ನಡುವಿನ ವ್ಯವಹಾರ ಏನು ಎಂಬುದೂ ನನಗೆ ಗೊತ್ತಿಲ್ಲ. ಏಕೆ ಜಗಳ ಆಡುತ್ತಿದ್ದೀರಿ ಎಂದು ಅವರನ್ನೇ ಕೇಳಬೇಕು ಎಂದು ಸತೀಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.

ಚಿಕ್ಕನಗೌಡರ್ ಸೋಲಿಸಿ ಬಿಡುತ್ತಿದ್ದ

ರಾಜು ಚಿಕ್ಕನಗೌಡರ್ ಸಣ್ಣ ಹುಡುಗ ಅಂದುಕೊಂಡಿದ್ದೆ. ರಾಣಿ ಚನ್ನಮ್ಮ ವಿವಿಯಲ್ಲಿ ಕುಳಿತು ಆತ ನನ್ನ ಸೋಲಿಸಿಯೆ ಬಿಡುತ್ತಿದ್ದ ಎಂದು ಹೇಳುವ ಮೂಲಕ ಶಾಸಕ ಸತೀಶ ಜಾರಕಿಹೊಳಿ ಅಚ್ಚರಿ ಮೂಡಿಸಿದರು. ಆರ್‌ಸಿಯು ವಿಷಯಕ್ಕೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಮಾಹಿತಿ ಕೇಳಿದ್ದೇವೆ. ಮಾಹಿತಿ ದೊರೆತಿದೆ. ಅಕ್ರಮ ವಸತಿ ಸಂಕೀರ್ಣದ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಶೀಘ್ರ ವಿವಿಯಲ್ಲಿ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಶಾಸಕ ಸತೀಶ ಹೇಳಿದರು.