ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದಲ್ಲಿ ಶುಕ್ರವಾರ ಮನೆಯವರ ವಿರೋಧವಿದ್ದರೂ ರಜಿಸ್ಟರ್ ಮದುವೆ ಮಾಡಿಕೊಂಡಿದ್ದ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ.

ಸುಮಾ ಯುವರಾಜ ಅಬ್ಬಾರ(21) ಕೊಲೆಯಾದ ದುರ್ದೈವಿ. ಪತಿ ಯುವರಾಜ ಅಬ್ಬಾರ (26), ಮಾವ ಬಸ್ಸಪ್ಪ ಅಬ್ಬಾರ(50), ಅತ್ತೆ ಮಹಾದೇವಿ ಅಬ್ಬಾರ (47), ಮೈದುನ ವೀರಣ್ಣ (28) ಹಾಗೂ ಸಂಬಂಧಿ ಚಂದ್ರಶೇಖರ ಘಂಟಿ(38) ಸೇರಿ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಸುಮಾ ತಂದೆ ಚನ್ನಮಲ್ಲಪ್ಪ ಮಡಿವಾಳರ ದೊಡವಾಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಘಟನೆಯ ಹಿನ್ನಲೆ

ಹತ್ತು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಸುಮಾ, ಯುವರಾಜ ಬೆಳವಡಿ ಗ್ರಾಮದಲ್ಲಿ ಮನೆ ಮಾಡಿ ಜೀವನ ಸಾಗಿಸುತ್ತಿದ್ದರು. ಈ ಮೊದಲು ಸುಮಾಳಿಗೆ ಒಂದು ಮದುವೆಯಾಗಿ ವಿಚ್ಛೇದನವಾಗಿತ್ತು. ಮದುವೆ ಮೊದಲು ಇವರಿಬ್ಬರೂ ಒಂದೇ ಓಣಿಯ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ನಂತರವೂ ಪ್ರೇಮ ಮುಂದುವರಿದಿತ್ತು. ಈ ನಡುವೆ ಯುವರಾಜ ಮನೆಯವರ ವಿರೋಧದ ನಡುವೆಯೂ ಬೈಲಹೊಂಗಲ ಸಬ್ ರಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಕೆಲವು ದಿನಗಳ ನಂತರ ಆತ ಮನೆಯವರ ಮಾತು ಕೇಳಿ ಪತ್ನಿಯನ್ನು ಹಿಂಸಿಸುತ್ತಿದ್ದ. ಶುಕ್ರವಾರ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಚನ್ನಮಲ್ಲಪ್ಪ ಆರೋಪಿಸಿದ್ದಾರೆ.