ಗೋಕಾಕ: ಗ್ರಾಮ ಸಹಾಯಕ ಎಸಿಬಿ ಅಧಿಕಾರಿಗಳ ಬಲೆಗೆ


ಗೋಕಾಕ: ಜಮೀನಿನ ಪಹಣಿ ಪತ್ರಿಕೆ ತಿದ್ದುಪಡಿ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಹದಿನೈದು ಸಾವಿರ ರೂ. ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಶನಿವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಭೂ ಸುಧಾರಣೆ ಇಲಾಖೆಯ ಗ್ರಾಮ ಸಹಾಯಕ ವೀರೇಂದ್ರ ಮಾದರ ಸಿಕ್ಕಿಬಿದ್ದಿರುವ ಅಧಿಕಾರಿ. ಕಳ್ಳಿಗುದ್ದಿ ಗ್ರಾಮದ ಕೃಷ್ಣಾಜಿ ಮುತಾಲಿಕದೇಸಾಯಿ ಎಂಬುವರ ಜಮೀನು ಪಹಣಿ ತಿದ್ದುಪಡಿಗಾಗಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ.

ಕಚೇರಿ ಪ್ರಾರಂಭವಾಗುತ್ತಲೆ ಎಸಿಬಿ ದಾಳಿ ನಡೆದಿದ್ದರಿಂದ ಕಂದಾಯ ಇಲಾಖೆಯ ಖುರ್ಚಿಗಳೆಲ್ಲ ಖಾಲಿಯಾದವು. ಈ ಬಗ್ಗೆ ಗ್ರೇಡ್-2 ತಹಸೀಲ್ದಾರ್ ಕುಲಕರ್ಣಿ ಅವರನ್ನು ವಿಚಾರಿಸಿದಾಗ, ಕೆಲಸದ ನಿಮಿತ್ತ ಸಿಬ್ಬಂದಿ ಬೆಳಗಾವಿ ಹಾಗೂ ಬೆಂಗಳೂರಿಗೆ ಹೋಗಿದ್ದಾರೆ ಎಂದು ತಿಳಿಸಿದರು.