ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ

ಬೆಳಗಾವಿ: ನಗರದಲ್ಲಿ ಭಾನುವಾರ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ನಡೆಯಲಿದ್ದು, ಅನ್ಯಕೋಮಿನ ಪ್ರಾಥರ್ನಾ ಮಂದಿರಗಳಿರುವ ರಸ್ತೆಯಲ್ಲಿ ಮೆರವಣಿಗೆ ಸಾಗುವುದರಿಂದ ಪೊಲೀಸ್ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಸೂಚಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಿಮಿತ್ತ ಆಯೋಜಿಸಿದ್ದ ಬಂದೋಬಸ್ತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೆರವಣಿಗೆ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆ ನಡೆಯಬಾರದು. ಕಿಡಿಗೇಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರತಿ ಗಣೇಶ ಮೂರ್ತಿ ಜತೆ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಗಣೇಶ ವಿಸರ್ಜನೆ ಮುಗಿಯುವವರೆಗೂ ಮೆರವಣಿಗೆ ಜತೆಯಲ್ಲಿದ್ದು, ಯಾವುದೇ ವಿಘ್ನವಾಗದಂತೆ ಎಚ್ಚರ ವಹಿಸಬೇಕು.

ಬೆಳಗಾವಿ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಿದೆ. ಯಾರಾದರೂ ಅಸಭ್ಯವಾಗಿ ನಡೆದುಕೊಂಡರೆ ಅಂಥವರಿಗೆ ತಿಳಿಹೇಳುವ ಕಾರ್ಯ ಪೊಲೀಸ್ ಸಿಬ್ಬಂದಿ ಮಾಡಬೇಕು. ಬೇರೆ ಜಿಲ್ಲೆಗಳಿಂದ ನಿಯುಕ್ತಿ ಮಾಡಲಾಗಿರುವ ಪೊಲೀಸ್ ಸಿಬ್ಬಂದಿ ತಮ್ಮ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಮಾದರಿಯಲ್ಲಿ ಇಲ್ಲಿಯೂ ನಿರ್ವಹಿಸಬೇಕು. ತಮ್ಮ ಠಾಣೆಗಳಿಗೆ ಹೊರಡುವ ಮುನ್ನ ತಮಗೆ ವಹಿಸಿದ ಕರ್ತವ್ಯ ಕುರಿತು ಪೊಲೀಸ್ ಆಯುಕ್ತರ ಕಚೇರಿಗೆ ಬಂದು ವರದಿ ಸಲ್ಲಿಸಬೇಕು. ಯಾವುದೇ ರೀತಿಯಲ್ಲಿ ಪೊಲೀಸ್ ಇಲಾಖೆಯ ಮೇಲೆ ಕಪ್ಪು ಚುಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಈಗಾಗಲೆ ನಗರದ ಸೂಕ್ಷ್ಮ, ಅತೀ ಸೂಕ್ಷ್ಮಪ್ರದೇಶಗಳಲ್ಲಿ 85 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೂ ಕಿಡಿಗೇಡಿಗಳ ಮೇಲೆ ನಿಗಾವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಕಂಟ್ರೋಲ್ ರೂಂಗೆ ತಿಳಿಸಬೇಕು ಎಂದರು.

ಡಿಸಿಪಿ ಸೀಮಾ ಲಾಟ್ಕರ್ ಮಾತನಾಡಿ, ಗಣೇಶ ವಿಸರ್ಜನೆಗೆ ಆಗಮಿಸಿದ ಡಿಎಸ್‌ಪಿಗಳು ತಮಗೆ ಯಾವ ಸೆಕ್ಟರ್ ಜವಾಬ್ದಾರಿ ನೀಡಲಾಗಿದೆ, ಯಾವ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಕೊಳ್ಳಬೇಕು. ಗಣೇಶ ವಿಸರ್ಜನೆ ದಿನದ 24 ಗಂಟೆವರೆಗೆ ನಡೆಯಲಿದ್ದು, ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದರು. ಗಣೇಶ ವಿಸರ್ಜನೆ ಸಂದರ್ಭ ಪೊಲೀಸ್ ಸಿಬ್ಬಂದಿ ಮೊಬೈಲ್ ನೋಡುವುದು, ಚಹಾ ಅಂಗಡಿಗಳಲ್ಲಿ ಕುಳಿತು ಹರಟೆ ಹೊಡೆಯುವುದನ್ನು ಮಾಡಬಾರದು. ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಾಗಿದೆ. ಹೊರಗಿನಿಂದ ಬಂದ ಸಿಬ್ಬಂದಿಗೆ ಸ್ಥಳೀಯ ಪೊಲೀಸರು ಸಹಕಾರ ನೀಡುತ್ತಾರೆ ಎಂದರು. ಡಿಸಿಪಿ ಮಹಾನಂದ ನಂದಗಾವಿ ಮತ್ತಿತರ ಅಧಿಕಾರಿಗಳು ಇದ್ದರು.